ಯೋಗಿ ಆದಿತ್ಯನಾಥ್
ಪಿಟಿಐ ಚಿತ್ರ
ಲಖನೌ: ‘ಮೊಘಲ್ ದೊರೆ ಔರಂಗಜೇಬ್‌ನನ್ನು ಹೊಗಳಿದ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬೂ ಆಸಿಂ ಆಜ್ಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿ, ಉತ್ತರ ಪ್ರದೇಶಕ್ಕೆ ಕರೆತನ್ನಿ. ಇಂಥವರನ್ನು ಹೇಗೆ ‘ಸರಿಪಡಿಸಬೇಕು’ ಎಂಬುದು ನಮಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಇಂಥವರಿಗೆ ಸೂಕ್ತವಾಗುವ ‘ಚಿಕಿತ್ಸೆ’ ಉತ್ತರ ಪ್ರದೇಶದಲ್ಲಿ ಲಭ್ಯ. ಅದನ್ನು ಹೇಗೆ ಕೊಡಬೇಕು ಎಂಬುದೂ ನಮಗೆ ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ.
‘ಹಿಂದೂಗಳ ಮೇಲೆ ‘ಜಝಿಯಾ’ ಎಂಬ ತೆರಿಗೆ ವಿಧಿಸಿದ್ದ ಹಾಗೂ ತನ್ನ ತಂದೆ ಬಾಯಾರಿದ್ದರೂ ನೀರು ಕೊಡದ ಔರಂಗಜೇಬ್ ಎಂದರೆ ಸಮಾಜವಾದಿ ಪಕ್ಷಕ್ಕೆ ದೇವರಿದ್ದಂತೆ. ಆ ಪಕ್ಷಕ್ಕೆ ತನ್ನ ಶಾಸಕರ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಅಜೀಂನ ಹೇಳಿಕೆಯನ್ನು ಪಕ್ಷ ಖಂಡಿಸಬೇಕು ಮತ್ತು ಉಚ್ಛಾಟಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಅದ್ಭುತ ಆಡಳಿತಗಾರ. ಆತ ಮಂದಿರಗಳ ಜತೆಯಲ್ಲಿ ಮಸೀದಿಗಳನ್ನೂ ನೆಲಸಮ ಮಾಡಿದ್ದ. ಮರಾಠಾ ಚಕ್ರವರ್ತಿ ಶಿವಾಜಿ ಮಹಾರಾಜ ಮತ್ತು ಸಾಂಭಾಜಿ ಜೊತೆಗಿನ ಔರಂಗಜೇಬ್‌ನ ಯುದ್ಧ ರಾಜಕೀಯ ಪ್ರೇರಿತವಾದದ್ದು’ ಎಂದು ಆಜ್ಮಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಗಾಗಿ ಮಹಾರಾಷ್ಟ್ರ ವಿಧಾನಸಭೆಯಿಂದ ಆಜ್ಮಿ ಅವರನ್ನು ಅಮಾನತುಗೊಳಿಸಲಾಗಿದೆ.
ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆ, ‘ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಶಿವಾಜಿ ಅಥವಾ ಸಾಂಭಾಜಿ ಕುರಿತು ತಾನು ಏನನ್ನೂ ಹೇಳಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.