ADVERTISEMENT

ದೂರಿನಲ್ಲಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ: ಮಮತಾ ವಿರುದ್ಧ ಆಯೋಗ ಕ್ರಮ?

ಪಿಟಿಐ
Published 4 ಏಪ್ರಿಲ್ 2021, 17:46 IST
Last Updated 4 ಏಪ್ರಿಲ್ 2021, 17:46 IST
ಬೋಯಾಲ್ ಮತಗಟ್ಟೆಗೆ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದಾಗ, ಅಲ್ಲಿಗೆ ಬಂದ ಅಪಾರ ಸಂಖ್ಯೆಯ ಜನರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದರು
ಬೋಯಾಲ್ ಮತಗಟ್ಟೆಗೆ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದಾಗ, ಅಲ್ಲಿಗೆ ಬಂದ ಅಪಾರ ಸಂಖ್ಯೆಯ ಜನರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದರು   

ನವದೆಹಲಿ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಬೋಯಾಲ್‌ ಮತಗಟ್ಟೆಯಲ್ಲಿ ಏಪ್ರಿಲ್ 1ರ ಮತದಾನದಂದು ಹೊರಗಿನ ವ್ಯಕ್ತಿಗಳು ಇದ್ದರು ಎಂದು ಮಮತಾ ಬ್ಯಾನರ್ಜಿ ಅವರು ಮಾಡಿದ್ದ ಆರೋಪ ಮತ್ತು ಅವರು ನೀಡಿದ್ದ ದೂರನ್ನು ಚುನಾವಣಾ ಆಯೋಗವು ತಿರಸ್ಕರಿಸಿದೆ. ಈ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಆಯೋಗ ಹೇಳಿದೆ.

ಈ ಸಂಬಂಧ ಮಮತಾ ಬ್ಯಾನರ್ಜಿ ಅವರಿಗೆ ಆಯೋಗವು ಪತ್ರ ಬರೆದಿದೆ. ‘ಮಮತಾ ವಿರುದ್ಧ ಜನಪ್ರತಿನಿಧಿ ಕಾಯ್ದೆಯ 131ನೇ ಸೆಕ್ಷನ್ (ಮತದಾನ ಪ್ರಕ್ರಿಯೆಗೆ ಅಡ್ಡಿ ಪಡಿಸಿದರೆ ದಂಡ), ಸೆಕ್ಷನ್ 123 (2)ರ (ಮತದಾನ ಪ್ರಕ್ರಿಯೆ ವೇಳೆ ಪ್ರಭಾವ ಬೀರಲು ಯತ್ನಿಸಿದರೆ ಮೂರು ತಿಂಗಳು ಜೈಲು ಸಜೆ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಆಯೋಗವು ಪತ್ರದಲ್ಲಿ ಹೇಳಿದೆ. ಈ ಬೆಳವಣಿಗೆಯಿಂದ ಮಮತಾ ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ವಿಧಾನಸಭಾ ಕ್ಷೇತ್ರಕ್ಕೆ ಬೇರೆ ರಾಜ್ಯದಿಂದ ಬಿಜೆಪಿ ಗೂಂಡಾಗಳನ್ನು ಕರೆಸಿದೆ. ಜನರು ಮತಗಟ್ಟೆಗೆ ತೆರಳುವುದನ್ನುಈ ಗೂಂಡಾಗಳು ತಡೆಯುತ್ತಿದ್ದಾರೆ. ಕೇಂದ್ರೀಯ ಪಡೆಗಳೂ ಇದೇ ಕೆಲಸ ಮಾಡುತ್ತಿವೆ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ಮಮತಾ ಅವರು ಆಯೋಗಕ್ಕೆ ಬರೆದಿದ್ದ ಲಿಖಿತ ದೂರಿನಲ್ಲಿ ಆರೋಪಿಸಿದ್ದರು.

ADVERTISEMENT

‘ಬೋಯಾಲ್‌ನಲ್ಲಿ ಏನಾಯಿತು ಎಂಬುದನ್ನು ಇಡೀ ದೇಶವೇ ನೋಡಿದೆ. ಆ ಘಟನೆಗಳಿಗೆ ಸಂಬಂಧಿಸಿದಂತೆ 12ಕ್ಕೂ ಹೆಚ್ಚು ವಿಡಿಯೊ-
ಆಡಿಯೊಗಳು ದೇಶದಾದ್ಯಂತ ಪ್ರಸಾರವಾಗಿವೆ. ಮತಗಟ್ಟೆಯಲ್ಲಿ ನೀವು ಅಧಿಕಾರಿಗಳ ವಿರುದ್ಧ ಬೈಗುಳಗಳ ಸುರಿಮಳೆ ಸುರಿಸುತ್ತಿದ್ದೀರಿ. ಅವರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು, ಅರೆಸೇನಾಪಡೆ ಸಿಬ್ಬಂದಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಇದ್ದರು’ ಎಂದು ಆಯೋಗವು ತನ್ನ ಪತ್ರದಲ್ಲಿ ಖಾರವಾಗಿ ಹೇಳಿದೆ.

‘ನಿಮ್ಮ ಪತ್ರದಲ್ಲಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ, ಹುರುಳಿಲ್ಲ; ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವಿಲ್ಲ ಎಂದು ಘಟನಾ ಸ್ಥಳದಿಂದ ತರಿಸಿಕೊಂಡ ವರದಿಗಳು ಮತ್ತು ನಮ್ಮ ವೀಕ್ಷಕರು ನೀಡಿದ ವರದಿಗಳು ಹೇಳುತ್ತವೆ. ಆದರೆ, ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳು, ಚುನಾವಣೆಯ ಕೇಂದ್ರವಾದ ಮತದಾರರನ್ನು ಹಾದಿ ತಪ್ಪಿಸುತ್ತಿವೆ. ಇಂತಹ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಯಾದವರು ಮಾಡುತ್ತಿದ್ದಾರೆ. ಇದು ವಿಷಾದನೀಯ’ ಎಂದು ಆಯೋಗವು ಛೀಮಾರಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.