ಮೋನಾ ಬುಗಾಲಿಯಾ ಅಲಿಯಾಸ್ ‘ಮೂಲಿ’ ದೇವಿ
Credit: X/@theskindoctor13
ಜೈಪುರ: ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ (ಆರ್‌ಪಿಎ) ಸುಮಾರು ಎರಡು ವರ್ಷಗಳ ಕಾಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು ವಂಚಿಸುತ್ತಿದ್ದ ರಾಜಸ್ಥಾನದ ಮಹಿಳೆಯನ್ನು ಬಂಧಿಸಲಾಗಿದೆ.
ಬಂಧಿತ ಮಹಿಳೆಯನ್ನು ಮೋನಾ ಬುಗಾಲಿಯಾ ಅಲಿಯಾಸ್ ‘ಮೂಲಿ’ ದೇವಿ ಎಂದು ಗುರುತಿಸಲಾಗಿದ್ದು, ಜೈಪುರದಲ್ಲಿ ಆಕೆಯ ವಿರುದ್ಧ ದೂರು ದಾಖಲಾಗಿದ್ದು, 2023ರಿಂದ ಆಕೆ ತಲೆಮರೆಸಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋನಾ ಅವರು ‘ಮೂಲಿ ದೇವಿ’ ಎಂದು ನಕಲಿ ದಾಖಲೆಗಳನ್ನು ಸಲ್ಲಿಸಿ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಜತೆಗೆ ಉನ್ನತ ಅಧಿಕಾರಿಗಳೊಂದಿಗೆ ಫೋಟೊಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದಾಗಿ ಆರೋಪಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬುಗಾಲಿಯಾ ಮೂಲತಃ ರಾಜಸ್ಥಾನದ ನಾಗೌರಾಂಡ್‌ನ ನಿಂಬಾ ಗ್ರಾಮದವರಾಗಿದ್ದಾರೆ. ಅವರ ತಂದೆ ಟ್ರಕ್ ಚಾಲಕರಾಗಿದ್ದಾರೆ. ಬುಗಾಲಿಯಾಗೆ ಸಂಬಂಧಿಸಿದ ಬಾಡಿಗೆ ಕೋಣೆಯಲ್ಲಿ ₹7 ಲಕ್ಷ ನಗದು, ಮೂರು ವಿಭಿನ್ನ ಪೊಲೀಸ್ ಸಮವಸ್ತ್ರಗಳು ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .
ಅಧಿಕೃತ ದಾಖಲೆಗಳ ಪ್ರಕಾರ ಬುಗಾಲಿಯಾ ಅವರು 2021ರಲ್ಲಿ ರಾಜಸ್ಥಾನ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ. ಬಳಿಕ ‘ಮೂಲಿ ದೇವಿ’ ಎಂಬ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನಾನು ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು ಎಂದು ಅವರು ವಿವರಿಸಿದ್ದಾರೆ.
ಬುಗಾಲಿಯಾ ಅವರು ಸಬ್ ಇನ್ಸ್‌ಪೆಕ್ಟರ್ ನೇಮಕಾತಿಗೆ ಮೀಸಲಾದ ವ್ಯಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿದ್ದರು. ಬಳಿಕ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ಕ್ರೀಡಾ ಕೋಟಾದ ಮೂಲಕ ದಾಖಲಾದ ಹಿಂದಿನ ಬ್ಯಾಚ್‌ನ ಅಭ್ಯರ್ಥಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಳು ಎಂದು ಅಧಿಕಾರಿ ಹೇಳಿದ್ದಾರೆ.
ಬುಗಾಲಿಯಾ ಅವರು ರಾಜಸ್ಥಾನ ಪೊಲೀಸ್ ಅಕಾಡೆಮಿಯ ಪರೇಡ್ ಮೈದಾನದಲ್ಲಿ ನಿಯಮಿತವಾಗಿ ಪೂರ್ಣ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಮತ್ತು ಹೊರಾಂಗಣ ಕವಾಯತುಗಳಲ್ಲಿಯೂ ಭಾಗವಹಿಸುತ್ತಿದ್ದರು. ಯುವ ಆಕಾಂಕ್ಷಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಈಕೆ ಉನ್ನತ ಅಧಿಕಾರಿಗಳೊಂದಿಗೆ ಫೋಟೊಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ತರಬೇತಿ ಇನ್ಸ್‌ಪೆಕ್ಟರ್‌ಗಳು ಬುಗಾಲಿಯಾಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಆಂತರಿಕ ವಿಚಾರಣೆ ವೇಳೆ ಆಕೆ ವಂಚನೆ ಬಯಲಾಗಿದೆ. ನಾನು ಕುಟುಂಬಸ್ಥರನ್ನು ಮೆಚ್ಚಿಸುವುದಕ್ಕಾಗಿ ಈ ರೀತಿ ಮಾಡಿರುವುದಾಗಿ ಬುಗಾಲಿಯಾ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.