ನೋಯ್ಡಾ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ಕುಟುಂಬದ ಮೂವರನ್ನು ಐದು ದಿನಗಳ ಕಾಲ 'ಡಿಜಿಟಲ್ ಬಂಧನ'ದಲ್ಲಿ ಇರಿಸಿದ ಅಪರಿಚಿತರು, ಸುಮಾರು ₹1 ಕೋಟಿ ವಂಚಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಫೆಬ್ರುವರಿ 1ರಂದು ಅಪರಿಚಿತ ಸಂಖ್ಯೆಯಿಂದ ವಿಡಿಯೊ ಕರೆ ಬಂದಿದ್ದು, ನಿಮ್ಮ ವಿರುದ್ಧ ಮುಂಬೈನ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಮಾರು 24 ಕಡೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ದೂರುದಾರ ಚಂದ್ರಭನ್ ಪಾಲಿವಾಲ್ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
'ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ನಿಮ್ಮ ವಿರುದ್ಧ ತನಿಖೆ ನಡೆಸುತ್ತಿದ್ದಾರೆ ಎಂದು ಕರೆ ಮಾಡಿದ ಅಪರಿಚಿತರು ಹಣ ಪಾವತಿಸದಿದ್ದಲ್ಲಿ ಬಂಧನಕ್ಕೆ ಒಳಗಾಗಬೇಕಾಗುತ್ತದೆ ಎಂದು ಚಂದ್ರಭನ್‌ಗೆ ಬೆದರಿಕೆಯೊಡ್ಡಿದರು' ಎಂದು ಅಧಿಕಾರಿಗಳು ಹೇಳಿದ್ದಾರೆ.
'ಅಪರಿಚಿತ ಕರೆ ಸ್ವೀಕರಿಸಿದ ಬಳಿಕ ಚಂದ್ರಭನ್ ಸೇರಿ, ಆತನ ಪತ್ನಿ ಮತ್ತು ಮಗಳನ್ನು ಸುಮಾರು ಐದು ದಿನಗಳ ಕಾಲ ಡಿಜಿಟನ್ ಬಂಧನದಲ್ಲಿ ಇರಿಸಿ, ₹1.1 ಕೋಟಿ ಹಣವನ್ನು ದೋಚಿದ್ದಾರೆ 'ಎಂದು ಉಪ ಪೊಲೀಸ್ ಆಯುಕ್ತೆ (ಸೈಬರ್ ಅಪರಾಧ ವಿಭಾಗ) ಪ್ರೀತಿ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.