ADVERTISEMENT

ಖಾಸಗಿ ವಾಹನಗಳಿಗೆ ₹3,000ಕ್ಕೆ FASTag ವಾರ್ಷಿಕ ಪಾಸ್; ಆ. 15ರಿಂದ: ಸಚಿವ ಗಡ್ಕರಿ

ಪಿಟಿಐ
Published 18 ಜೂನ್ 2025, 8:05 IST
Last Updated 18 ಜೂನ್ 2025, 8:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಅಡೆತಡೆಗಳಿಲ್ಲದ ಹೆದ್ದಾರಿ ಸಂಚಾರಕ್ಕಾಗಿ ಖಾಸಗಿ ವಾಹನಗಳಿಗೆ ₹3 ಸಾವಿರಕ್ಕೆ ಫಾಸ್‌ಟ್ಯಾಗ್‌ ವಾರ್ಷಿಕ ಪಾಸ್‌ ವಿತರಿಸುವ ಯೋಜನೆ ಆ. 15ರಿಂದ ಜಾರಿಗೆ ಬರಲಿದೆ’ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಈ ವಾರ್ಷಿಕ ಪಾಸ್‌ ಒಂದು ವರ್ಷದ ಅವಧಿ ಅಥವಾ 200 ಟ್ರಿಪ್‌ಗಳಿಗೆ ಅನ್ವಯಿಸಲಿದೆ. ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಇದರಲ್ಲಿ ಕಾರು, ಜೀಪು ಮತ್ತು ವ್ಯಾನ್‌ಗಳು ಸೇರುತ್ತವೆ’ ಎಂದಿದ್ದಾರೆ.

‘ಈ ವಾರ್ಷಿಕ ಪಾಸ್‌ ಪಡೆದು ದೇಶದ ಉದ್ದಗಲದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್‌ಮಾರ್ಗ್ ಯಾತ್ರಾ ಆ್ಯಪ್‌ನಲ್ಲಿ ಲಭ್ಯ. ಇದರೊಂದಿಗೆ NHAI ಮತ್ತು MoRTH ಅಂತರ್ಜಾಲ ಪುಟಗಳಲ್ಲೂ ಲಭ್ಯ’ ಎಂದು ತಿಳಿಸಿದ್ದಾರೆ.

ADVERTISEMENT

‘60 ಕಿ.ಮೀ. ವ್ಯಾಪ್ತಿಯಲ್ಲಿನ ಟೋಲ್‌ ಪ್ಲಾಜಾಗಳು ಮತ್ತು ಟೋಲ್‌ ಪಾವತಿಯನ್ನು ಸರಳೀಕರಿಸುವ ಬಹುದಿನಗಳ ಬೇಡಿಕೆಯನ್ನು ಈ ಯೋಜನೆ ಮೂಲಕ ಈಡೇರಿಸಲಾಗುತ್ತಿದೆ. ಇದರಿಂದ ಕಾಯುವ ಸಮಯ ತಗ್ಗಲಿದೆ. ಒತ್ತಡ ಮತ್ತು ಟೋಲ್‌ ಸಿಬ್ಬಂದಿಯೊಂದಿಗಿನ ಅನಗತ್ಯ ವಿವಾದ ತಪ್ಪಿಸಲಿದೆ. ವಾರ್ಷಿಕ ಪಾಸ್ ಮೂಲಕ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಆರಾಮದಾಯಕ ಅನುಭವ ಖಾಸಗಿ ವಾಹನ ಮಾಲೀಕರದ್ದಾಗಲಿದೆ’ ಎಂದು ಗಡ್ಕರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.