ADVERTISEMENT

ಕೋವಿಡ್-19: ಮುಂಬೈನ ಫುಟ್ಬಾಲ್ ಕೋಚ್ ಈಗ ತರಕಾರಿ ಮಾರಾಟಗಾರ...

ಏಜೆನ್ಸೀಸ್
Published 16 ಜುಲೈ 2020, 12:29 IST
Last Updated 16 ಜುಲೈ 2020, 12:29 IST
ಫುಟ್‌ಬಾಲ್ ತರಬೇತುದಾರ ಸಾದ್ ಭೋಸಲೆ ಈಗ ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ
ಫುಟ್‌ಬಾಲ್ ತರಬೇತುದಾರ ಸಾದ್ ಭೋಸಲೆ ಈಗ ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ   

ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಪರಿಣಾಮ ಹಲವರು ಉದ್ಯೋಗ ಕಳೆದು ಕೊಂಡಿದ್ದಾರೆ. ಜೀವನ ನಿರ್ವಹಣೆಗಾಗಿ ಮುಂಬೈನ ಫುಟ್ಬಾಲ್ ತರಬೇತುದಾರರೊಬ್ಬರು ತರಕಾರಿ ಮಾರುತ್ತಿದ್ದಾರೆ.

ಮುಂಬೈನಲ್ಲಿ ನೆಲೆಸಿರುವ ಫುಟ್ಬಾಲ್ ತರಬೇತುದಾರ ಪ್ರಸಾದ್ ಭೋಸಲೆ ಕಾಂಡಿವಲಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

'ನಾನು ಕಳೆದ ಎರಡು ತಿಂಗಳಿಂದ ತರಕಾರಿ ಮಾರಾಟ ಮಾಡುತ್ತಿದ್ದೇನೆ. ಆರಂಭದಲ್ಲಿ ನಾನು ಬೀದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದೆ. ಆದರೆ, ಅಧಿಕಾರಿಗಳು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ನಾನು ಅಂಗಡಿಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿಂದಲೇ ತರಕಾರಿ ಮಾರಾಟ ಮಾಡುತ್ತಿದ್ದೇನೆ. ಬಾಡಿಗೆ ಆರು ಸಾವಿರ ರೂಪಾಯಿ ನೀಡುತ್ತಿದ್ದೇನೆ. ಕಳೆದ ಐದು ವರ್ಷಗಳಿಂದ ನಾನು ಫುಟ್ಬಾಲ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದೆ ಮತ್ತು ಈ ಮೊದಲು ತಿಂಗಳಿಗೆ ನಾನು ಇಪ್ಪತ್ತೈದು ಸಾವಿರ ಸಂಪಾದಿಸುತ್ತಿದ್ದೆ. ಆದರೆ ತರಬೇತಿ ನೀಡುತ್ತಿದ್ದ ಶಾಲೆಯನ್ನು ಮುಚ್ಚಿರುವುದರಿಂದಾಗಿ ತರಕಾರಿ ಮಾರಾಟಕ್ಕಿಳಿದಿದ್ದೇನೆ' ಎಂದಿದ್ದಾರೆ. ಈ ಕುರಿತು ಎಎನ್‌ಐ ವರದಿ ಮಾಡಿದೆ.

ADVERTISEMENT

ಬದುಕಲು ಬೇರೆ ಆಯ್ಕೆಗಳೇ ಇಲ್ಲವಾದಾಗ ನನ್ನ ಸ್ನೇಹಿತರೊಬ್ಬರು ನನಗೆ ಸಹಾಯ ಮಾಡಿದರು. ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ತಿರುಗುವವರೆಗೂ ತರಕಾರಿ ಮಾರಾಟ ಮಾಡುವ ಉಪಾಯವನ್ನು ನೀಡಿದರು. ಆರಂಭದಲ್ಲಿ ತರಕಾರಿ ಮಾರಲು ಮತ್ತು ತರಕಾರಿ ಚೀಲಗಳನ್ನು ಹೊತ್ತು ಸಾಗಲು ಮುಜುಗರ ಆಗಿತ್ತು. ಏಕೆಂದರೆ ನಾನು ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರನಾಗಿರುವೆ ಮತ್ತು ಕೆಲವು ತಿಂಗಳ ಹಿಂದೆಯಷ್ಟೇ ತರಬೇತುದಾರನಾಗಿದ್ದೆ. ಆದರೆ ತರಕಾರಿ ಮಾರುವುದನ್ನು ಬಿಟ್ಟು ನನಗೆ ಯಾವುದೇ ಆಯ್ಕೆಗಳು ಇರಲಿಲ್ಲ ಎಂದಿದ್ದಾರೆ.

ಈಗ ಪ್ರತಿದಿನ ನಾನು 500-600 ರೂಪಾಯಿಗಳನ್ನು ಗಳಿಸುತ್ತಿದ್ದೇನೆ ಮತ್ತು ತರಕಾರಿಗಳನ್ನು ಹೋಂ ಡೆಲಿವರಿ ಮಾಡಲು ಕೂಡ ಪ್ರಾರಂಭಿಸಿದ್ದೇನೆ. ಇದಕ್ಕಾಗಿ ನನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರತ್ಯೇಕ ಪೇಜ್ ಮಾಡಿ ಅದರಲ್ಲಿ ನನ್ನ ಸಂಪರ್ಕ ಸಂಖ್ಯೆಯನ್ನು ಹಂಚಿಕೊಂಡಿರುವುದಾಗಿ ತಿಳಿಸಿದರು.

ಅಮ್ಮ, ಅಪ್ಪ ಸೇರಿ ನನ್ನ ಕುಟುಂಬದಲ್ಲಿ ನಾಲ್ವರಿದ್ದೇವೆ. ಈಗ ನನಗೆ ವಿಚಿತ್ರವಾಗಿ ಅನಿಸುತ್ತಿಲ್ಲ. ಸ್ವಂತ ವ್ಯವಹಾರವನ್ನು ಶುರು ಮಾಡುವಂತೆ ಪರಿಸ್ಥಿತಿಯೇ ಕಲಿಸಿದೆ.

ಗುರುವಾರ ದೇಶದಲ್ಲಿ 32,695 ಕೊರೊನಾ ವೈರಸ್ ದೃಢಪಟ್ಟ ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯು 9,68,876ಕ್ಕೆ ಏರಿಕೆಯಾಗಿದೆ. 3,31,146 ಸಕ್ರಿಯ ಪ್ರಕರಣಗಳೊಂದಿಗೆ 6,12,815 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 24,915 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.