ADVERTISEMENT

ವಿದೇಶಿ ಗಣ್ಯರ ಭೇಟಿಗಿಲ್ಲ ಅವಕಾಶ | ಸರ್ಕಾರಕ್ಕೆ ಕಾಡುತ್ತಿದೆ ಅಭದ್ರತೆ: ರಾಹುಲ್

ಪುಟಿನ್‌ ಜೊತೆ ಸಭೆ ಏರ್ಪಡಿಸದ ಕೇಂದ್ರದ ನಡೆಗೆ ರಾಹುಲ್ ಆಕ್ಷೇಪ

ಪಿಟಿಐ
Published 4 ಡಿಸೆಂಬರ್ 2025, 9:53 IST
Last Updated 4 ಡಿಸೆಂಬರ್ 2025, 9:53 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆ ತಮ್ಮ ಸಭೆ ಆಯೋಜಿಸಲು ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಗುರುವಾರ ಕಿಡಿ ಕಾರಿದ್ದಾರೆ.

ADVERTISEMENT

‘ಇಂಥ ನಡೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಿರುವ ಅಭದ್ರತೆಯನ್ನು ತೋರಿಸುತ್ತದೆ’ ಎಂದೂ ಅವರು ಚಾಟಿ ಬೀಸಿದ್ದಾರೆ.

ಪುಟಿನ್‌ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಗುರುವಾರ ಇಲ್ಲಿಗೆ ಬಂದಿಳಿದಿದ್ದಾರೆ.

‘ಭಾರತಕ್ಕೆ ಭೇಟಿ ನೀಡುವ ವಿದೇಶಿ ಗಣ್ಯರ ಜೊತೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಭೆ ನಡೆಸುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವಾಲಯ ಈ ಸಂಪ್ರದಾಯವನ್ನು ಪಾಲನೆ ಮಾಡುತ್ತಿಲ್ಲ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

‘ಇತರ ದೇಶಗಳ ನಾಯಕರು ಭಾರತಕ್ಕೆ ಬಂದಾಗ ಇಲ್ಲಿನ ಲೋಕಸಭೆ ವಿಪಕ್ಷ ನಾಯಕನೊಂದಿಗೆ ಸಭೆ ನಡೆಸುವ ಸಂಪ್ರದಾಯ ವನ್ನು ಈ ಹಿಂದಿನ ಪ್ರಧಾನಿಗಳಾದ ಅಟಲ್‌ ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಪಾಲಿಸಲಾಗುತ್ತಿತ್ತು’ ಎಂದೂ ಹೇಳಿದರು.

ಸಂಸತ್‌ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದೇಶಿ ಗಣ್ಯರು ಭಾರತಕ್ಕೆ ನೀಡಿದ ಸಂದರ್ಭದಲ್ಲಿ ಅಥವಾ ನಾನು ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನನ್ನನ್ನು ಭೇಟಿ ಮಾಡದಂತೆ ಕೇಂದ್ರ ಸರ್ಕಾರ ಇತರ ದೇಶಗಳಿಗೆ ಹೇಳುತ್ತಿದೆ’ ಎಂದರು.

‘ನಿಮ್ಮನ್ನು ಭೇಟಿ ಮಾಡಬಾರದು ಎಂಬುದಾಗಿ ಭಾರತ ಸರ್ಕಾರ ನಮಗೆ ಹೇಳಿದೆ ಎಂದು ವಿವಿಧ ದೇಶಗಳು ನನಗೆ ಮಾಹಿತಿ ನೀಡಿವೆ. ಇದೇ ಈ ಸರ್ಕಾರದ ನೀತಿಯಾಗಿದ್ದು, ಅದನ್ನು ಚಾಚೂತಪ್ಪದೇ ಪಾಲಿಸಲಾಗುತ್ತಿದೆ’ ಎಂದು ಟೀಕಿಸಿದರು.

ಪುಟಿನ್‌ ಭೇಟಿ ಕುರಿತ ಪ್ರಶ್ನೆಗೆ,‘ಸರ್ಕಾರ ಮಾತ್ರವಲ್ಲ, ನಾವು ಕೂಡ ಭಾರತವನ್ನು ಪ್ರತಿನಿಧಿಸುತ್ತೇವೆ.
ಆದರೆ, ವಿರೋಧ ಪಕ್ಷಗಳ ನಾಯಕರು ವಿದೇಶಿ ಗಣ್ಯರನ್ನು ಭೇಟಿ ಮಾಡುವುದನ್ನು ಈ ಸರ್ಕಾರ ಬಯಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಸರ್ಕಾರ ಏಕೆ ಹೀಗೆ ನಡೆದು ಕೊಳ್ಳುತ್ತಿದೆ’ ಎಂಬ ಮತ್ತೊಂದು ಪ್ರಶ್ನೆಗೆ, ‘ಇದು ಅವರಲ್ಲಿನ (ಪ್ರಧಾನಿ ಮೋದಿ) ಅಭದ್ರತೆ ಭಾವನೆಯನ್ನು ತೋರಿಸುತ್ತದೆ’ ಎಂದು ಉತ್ತರಿಸಿದರು.

ಪ್ರತಿ ಪ್ರಜಾಪ್ರಭುತ್ವ ವ್ಯವಸ್ಥೆಯೂ ಶಿಷ್ಟಾಚಾರಗಳನ್ನು ಹೊಂದಿರುತ್ತದೆ. ಆದರೆ, ಶಿಷ್ಟಾಚಾರ ಉಲ್ಲಂಘನೆ ಮಾಡುವುದೇ ಈ ಸರ್ಕಾರದ ನೀತಿಯಾಗಿದೆ. ಭಿನ್ನ ದನಿಗೆ ಈ ಸರ್ಕಾರ ಅವಕಾಶ ನೀಡುವುದಿಲ್ಲ
ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.