ಆತಿಶಿ
ನವದೆಹಲಿ: ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು ನೀಡುವುದಾಗಿ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಆಡಳಿತಾರೂಢ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಕುರಿತು ಸ್ಪಷ್ಟೀಕರಣ ಬಯಸಿ ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಇನ್ನು ನಾಲ್ಕು ದಿನ ಮಾತ್ರ ಉಳಿದಿದೆ. ಮಾಜಿ ಮುಖ್ಯಮಂತ್ರಿ ಆತಿಶಿ ಅವರ ನೇತೃತ್ವದಲ್ಲಿ ಮಂಡಿ ಹೌಸ್ ಮೆಟ್ರೊ ನಿಲ್ದಾಣದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬರೆದುಕೊಂಡಿರುವ ಆತಿಶಿ, 'ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಾಲ್ಕು ದಿನ ಮಾತ್ರ ಬಾಕಿಯಿದೆ. ದೆಹಲಿಯ ಮಹಿಳೆಯರು ಕಾತರದಿಂದ ಕಾಯುತ್ತಿದ್ದಾರೆ. ₹2,500 ಯಾವಾಗ ಸಿಗಲಿದೆ? ಮಾರ್ಚ್ 8ರಂದು ದೆಹಲಿಯ ಎಲ್ಲ ಮಹಿಳೆಯರಿಗೆ ಮೊದಲ ಕಂತು ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈ ಗ್ಯಾರಂಟಿ ಈಡೇರಿಸಲಾಗುತ್ತದೆಯೇ ಅಥವಾ ಘೋಷಣೆಗಷ್ಟೇ ಸೀಮಿತವಾಗಲಿದೆಯೇ' ಎಂದು ಅವರು ಪ್ರಶ್ನಿಸಿದ್ದಾರೆ.
ಎಎಪಿ ಶಾಸಕ ಕುಲದೀಪ್ ಕುಮಾರ್ ಸಹ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಂದ ಸ್ಪಷ್ಟನೆ ಬಯಸಿದ್ದಾರೆ. ಜನಸಾಮಾನ್ಯರ ಖಾತೆಗೆ ₹15 ಲಕ್ಷ ಜಮೆ ಆಗಲಿದೆ ಎಂಬ ಟೊಳ್ಳು ಭರವಸೆಯಂತೆ ಇದು ಕೂಡ 'ಜುಮ್ಲಾ' ಭರವಸೆ ಆಗಲಿದೆಯೇ ಎಂದು ಲೇವಡಿ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 26 ವರ್ಷಗಳ ಬಳಿಕ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48 ಹಾಗೂ ಎಎಪಿ 22 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.