ನಮಾಜ್ (ಪ್ರಾತಿನಿಧಿಕ ಚಿತ್ರ)
– ಗೆಟ್ಟಿ ಚಿತ್ರ
ಅಯೋಧ್ಯೆ: ಈ ವಾರ ಹೋಳಿ ಆಚರಣೆ ಇರುವುದರಿಂದ ಅಯೋಧ್ಯೆಯಾದ್ಯಂತ ಶುಕ್ರವಾರ ಜುಮಾ ಪ್ರಾರ್ಥನೆ 2 ಗಂಟೆಯ ಬಳಿಕ ನಡೆಸಲಾಗುವುದು ಎಂದು ಮುಸ್ಲಿಂ ಧರ್ಮಗುರು ಒಬ್ಬರು ಹೇಳಿದ್ದಾರೆ.
ಈ ವಾರದ ಜುಮಾ ಪ್ರಾರ್ಥನೆ ನಿರ್ವಹಿಸುವ ಸಮಯದ ಬಗ್ಗೆ ಅಯೋಧ್ಯೆಯ ಮುಖ್ಯ ಧರ್ಮಗುರು ಮೊಹಮ್ಮದ್ ಹನೀಫ್ ಈ ಬಗ್ಗೆ ಬುಧವಾರ ಸೂಚನೆ ಹೊರಡಿಸಿದ್ದಾರೆ. ಇದು ಈ ವರ್ಷದ ರಂಜಾನ್‌ನ ಎರಡನೇ ಶುಕ್ರವಾರದ ಪ್ರಾರ್ಥನೆಯೂ ಹೌದು.
‘ಹೋಳಿ ಆಚರಣೆಗೆ ಅನುಗುಣವಾಗಿ ಜುಮಾ ಪ್ರಾರ್ಥನೆಯ ಸಮಯವನ್ನು ನಿಗದಿಪಡಿಸಲಾಗುವುದು. 2 ಗಂಟೆಯ ನಂತರ ಪ್ರಾರ್ಥನೆ ಇಟ್ಟುಕೊಳ್ಳಬೇಕು ಎಂದು ನಾವು ಎಲ್ಲಾ ಮಸೀದಿಗಳಿಗೆ ಸೂಚಿಸಿದ್ದೇವೆ. ಸಂಜೆ 4.30ರವರಗೆ ಜುಮಾ ನಮಾಜ್ ನಿರ್ವಹಿಸಲು ಅವಕಾಶ ಇದೆ’ ಎಂದು ಅಯೋಧ್ಯೆಯ ಕೇಂದ್ರ ಮಸೀದಿ ‘ಮಸ್ಜಿದ್ ಸರಾರಿಯ’ ಅಧ್ಯಕ್ಷರೂ ಆಗಿರುವ ಮೊಹಮಮ್ಮದ್ ಹನೀಫ್ ಹೇಳಿದ್ದಾರೆ.
‘ಹೋಳಿ ಸಂದರ್ಭದಲ್ಲಿ ಎಲ್ಲರೂ ಶಾಂತ ಹಾಗೂ ಉದಾರ ರೀತಿಯಲ್ಲಿ ವರ್ತಿಸಬೇಕು ಎಂದು ಮುಸಲ್ಮಾನರಲ್ಲಿ ನಾನು ಮನವಿ ಮಾಡಿದ್ದೇನೆ. ಯಾರಾದರೂ ಹೋಳಿಯ ಬಣ್ಣ ಹಚ್ಚಿದರೆ, ಅವರೊಂದಿಗೆ ಮುಗುಳ್ನಕ್ಕು, ಮತ್ತು ಪ್ರೀತಿ ಮತ್ತು ಗೌರವದ ಭಾವನೆಯಲ್ಲಿ 'ಹೋಳಿ ಮುಬಾರಕ್' ಎಂದು ಹಾರೈಸಿ’ ಎಂದು ಅವರು ಹೇಳಿದ್ದಾರೆ.
‘ಹೋಳಿ ಹಾಗೂ ಜುಮಾ ಒಂದೇ ದಿನ ಬಂದಿರುವುದು ಇದೇ ಮೊದಲಲ್ಲ. ಆಗಾಗ್ಗೆ ಬರುತ್ತಲೇ ಇರುತ್ತದೆ. ನಮ್ಮ ಏಕತೆಯನ್ನು ಗಟ್ಟಿಗೊಳಿಸಲು ನಮಗೆ ಇರುವ ಅವಕಾಶ ಇದು’ ಎಂದು ಹೇಳಿದ್ದಾರೆ. ಅಲ್ಲದೆ ಹಿಂದೂಗಳಿಗೆ ಹೋಳಿಯ ಶುಭಾಶಯವನ್ನೂ ತಿಳಿಸಿದ್ದಾರೆ.
ಮಾರ್ಚ್ 14ರಂದು ಹೋಳಿ ಆಚರಣೆ ಹಾಗೂ ಜುಮಾ ಪ್ರಾರ್ಥನೆ ಇರುವುದರಿಂದ ಉಭಯ ಆಚರಣೆಗಳು ಶಾಂತಿಯುತವಾಗಿ ನಡೆಯಲು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
‘ಹೋಳಿ ಆಚರಣೆಗೆ ಬೇಕಾದ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋಮು ಉದ್ವಿಗ್ನತೆಯನ್ನು ತಪ್ಪಿಸಲು ಶಾಂತಿ ಸಮಿತಿ ಸಭೆಯನ್ನೂ ನಡೆಸಲಾಗಿದೆ ಎಂದು’ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.