ಬೆಂಗಳೂರು: ಸೆಂಟರ್ ಫಾರ್ ರೈಲ್ವೆ ಇನ್‌ಫಾರ್ಮೆಷನ್ ಸಿಸ್ಟಮ್ (CRIS) ವತಿಯಿಂದ ರೈಲು ಪ್ರಯಾಣದ ಟಿಕೆಟ್ ಬುಕಿಂಗ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದ್ದು, ಬಹುತೇಕ ಬದಲಾವಣೆಗಳು ಈ ವರ್ಷಾಂತ್ಯಕ್ಕೆ ಸರಾಗವಾಗಲಿವೆ.
ಬೇಕಾದ ಸೀಟುಗಳಿಗೆ ಅವಕಾಶ
ಮುಖ್ಯವಾಗಿ ಟಿಕೆಟ್ ಬುಕ್ ಮಾಡುವಾಗ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತಿದೆ. ಬಸ್ ಟಿಕೆಟ್ ಬುಕಿಂಗ್‌ನಲ್ಲಿ ಈ ಅವಕಾಶ ಇದೆ. ಇದೇ ರೀತಿ ಇನ್ಮುಂದೆ ರೈಲಿನಲ್ಲೂ ತಮಗೆ ಬೇಕಾದ ಸೀಟುಗಳನ್ನು ಪ್ರಯಾಣಿಕರು ಮುಂಗಡ ಬುಕ್ ಮಾಡಬಹುದು.
ಇದರಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಎಂಬ ಕೆಲ ವರ್ಗದ ಮೀಸಲು ಆಯ್ಕೆಗಳೂ ಸಹ ಇರುತ್ತವೆ. ಟಿಕೆಟ್ ಬುಕಿಂಗ್ ಹಿಂದೆಂದಿಗಿಂತಲೂ ಸುಲಭ ಮತ್ತು ಪಾರದರ್ಶಕವಾಗಿ ಇರುವಂತೆ ವೆಬ್‌ಸೈಟ್ ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಸದ್ಯ CRIS ವತಿಯಿಂದ ನಿಮಿಷಕ್ಕೆ ಗರಿಷ್ಠ 32,000 ಟಿಕೆಟ್‌ಗಳು ಬುಕ್ ಆಗುತ್ತಿವೆ. ಹೊಸ ವ್ಯವಸ್ಥೆ ಜಾರಿಯಿಂದ ಇದರ ಪ್ರಮಾಣವನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ. ಹೀಗಾಗಿ ಟಿಕೆಟ್ ಬುಕಿಂಗ್ ವೇಳೆ ಗೊಂದಲ, ಸಮಸ್ಯೆಗಳು ಇರುವುದಿಲ್ಲ, ಅತ್ಯಂತ ತ್ವರಿತವಾಗಿ ಟಿಕೆಟ್ ಬುಕ್ ಆಗುತ್ತವೆ ಎಂದು ಹೇಳಲಾಗಿದೆ.
4 ಗಂಟೆಯಲ್ಲ 8 ಗಂಟೆ ಮೊದಲೇ ಚಾರ್ಟ್ ರೆಡಿ
ಸದ್ಯ ರೈಲು ಪ್ರಯಾಣದ ಚಾರ್ಟ್ ಕೇವಲ 4 ಗಂಟೆ ಮೊದಲು ಬಿಡುಗಡೆಯಾಗುತ್ತಿತ್ತು. ಇದರಿಂದ ಟಿಕೆಟ್ ತಪ್ಪುವ ಪ್ರಯಾಣಿಕರಿಗೆ ಕೊನೆಯ ಕ್ಷಣಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ತೀವ್ರ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಚಾರ್ಟ್ ಪಟ್ಟಿಯನ್ನು ಒಂದು ದಿನ ಮೊದಲೇ ಬಿಡುಗಡೆ ಮಾಡಬೇಕು ಎಂದು ಕಳೆದ ಕೆಲ ದಿನಗಳಿಂದ ಕೆಲ ರೈಲು ವಲಯಗಳಲ್ಲಿ ಪ್ರಾಯೋಗಿಕವಾಗಿ ಸಿದ್ದತೆ ಆರಂಭಿಸಲಾಗಿತ್ತು.
ಸಿದ್ದತೆಗಳ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿರುವ ರೈಲ್ವೆ ಇಲಾಖೆ, ಇನ್ಮುಂದೆ 8 ಗಂಟೆ ಮೊದಲೇ ಚಾರ್ಟ್ ಪಟ್ಟಿ ಬಿಡುಗಡೆಯಾಗಬೇಕು ಎಂದು ಆದೇಶಿಸಿದೆ. ಉದಾಹರಣೆಗೆ ನಾಳೆ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲುಗಳ ಚಾರ್ಟ್ ಪಟ್ಟಿ ಇಂದು ರಾತ್ರಿ 9 ಗಂಟೆಗೆ ಬಿಡುಗಡೆಯಾಗಬೇಕು. ಈ ನಿಯಮ ಮುಂದಿನ ಒಂದೆರಡು ತಿಂಗಳಲ್ಲಿ ದೇಶದಾದ್ಯಂತ ಜಾರಿಗೆ ಬರಲಿದೆ ಎನ್ನಲಾಗಿದೆ.
ದೃಢಿಕರಿಸಿಕೊಂಡವರಿಗೆ ಮಾತ್ರ ತತ್ಕಾಲ್ ಟಿಕೆಟ್
ವೆಬ್‌ಸೈಟ್ ಹಾಗೂ ಐಆರ್‌ಸಿಟಿಸಿ ಆ್ಯಪ್‌ನಲ್ಲಿ ಅಧಾರ್ ಮೂಲಕ ದೃಢಿಕರಿಸಿಕೊಂಡವರಿಗೆ ಮಾತ್ರ ಇನ್ಮುಂದೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.
ಈ ನಿಯಮ ನಾಳೆಯಿಂದಲೇ (ಜುಲೈ 1ರಿಂದ) ಜಾರಿಗೆ ಬರಲಿದೆ ಎಂದು ಇಲಾಖೆ ತಿಳಿಸಿದೆ. ಈ ಮೊದಲು ಆಧಾರ್ ಮೂಲಕ ದೃಢಿಕರಣ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಹೊಸ ಬದಲಾವಣೆ ಪ್ರಕಾರ ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಇತರೆ ಸೂಕ್ತ ದಾಖಲೆಗಳನ್ನು ಕೊಟ್ಟೂ ದೃಢಿಕರಿಸಿಕೊಳ್ಳಬಹುದು ಎಂದು ತಿಳಿಸಿದೆ.
ಅಲ್ಲದೇ ಒಟಿಪಿ ಮೂಲಕವೂ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು.
ಈ ನಿಯಮದಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ ಆಗುತ್ತಿದ್ದ ಗೊಂದಲ, ಟಿಕೆಟ್ ಬ್ಲಾಕ್ ಆಗುವುದನ್ನು ತಡೆಯಬಹುದಾಗಿದೆ ಎಂದು ಹೇಳಿದೆ.
ಈ ಎಲ್ಲ ಹೊಸ ಬದಲಾವಣೆಗಳ ಜೊತೆ ಜೊತೆಯಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಹಾಗೂ ಐಆರ್‌ಸಿಟಿಸಿ ಸೂಪರ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು ಇದೇ ವರ್ಷ ಡಿಸೆಂಬರ್ ವೇಳೆಗೆ ಎಲ್ಲ ಹೊಸ ಬದಲಾವಣೆಗಳು ಸಾರ್ವಜನಿಕರಿಗೆ ಸುಲಭವಾಗಿ ದೊರೆಯುತ್ತವೆ ಎನ್ನಲಾಗಿದೆ. ಈ ಕುರಿತು ‘ಟೈಮ್ಸ್ ಆಫ್ ಇಂಡಿಯಾ ಇಂಡಿಯಾ ಟೈಮ್ಸ್’ ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.