ನರೇಂದ್ರ ಮೋದಿ
ನವದೆಹಲಿ: ಕೆನಡಾದಲ್ಲಿ ನಡೆಯಲಿರುವ ಜಿ–7 ಶೃಂಗಸಭೆಯು ಜಾಗತಿಕ ಸಮಸ್ಯೆಗಳು ಮತ್ತು ಜಾಗತಿಕ ಆದ್ಯತೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಭಾನುವಾರ ರಾತ್ರಿ ದೆಹಲಿಯಿಂದ ಹೊರಟ್ಟಿದ್ದಾರೆ. ಇದೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನದ ಮೇರೆಗೆ ಕನಾನಸ್ಕಿಸ್‌ನಲ್ಲಿ ನಡೆಯಲಿರುವ ಶೃಂಗದಲ್ಲಿ ಭಾಗವಹಿಸಲಿದ್ದೇನೆ. ಜತೆಗೆ, ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೀಡಿರುವ ದೃಢ ಬೆಂಬಲಕ್ಕಾಗಿ ಪಾಲುದಾರ ರಾಷ್ಟ್ರಗಳಿಗೆ ಧನ್ಯವಾದ ಹೇಳುತ್ತೇನೆ. ಜತೆಗೆ, ಭಯೋತ್ಪಾದನೆ ಎದುರಿಸುವ ಬಗ್ಗೆ ಜಾಗತಿಕ ತಿಳುವಳಿಕೆಯನ್ನು ಹೆಚ್ಚಿಸಲು ಈ ಮೂರು ರಾಷ್ಟ್ರಗಳ ಪ್ರವಾಸವು ಒಂದು ಅವಕಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೋದಿ ಅವರು ಇಂದು ಮತ್ತು ನಾಳೆ (ಜೂ.15&16) ಯೂರೋಪ್‌ನ ಸೈಪ್ರಸ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಸೈಪ್ರಸ್ ಆಪ್ತ ಸ್ನೇಹಿತ ಮತ್ತು ಪ್ರಮುಖ ಪಾಲುದಾರ ದೇಶವಾಗಿದೆ. ಈ ಭೇಟಿಯು ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ, ಭದ್ರತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಐತಿಹಾಸಿಕ ಬಾಂಧವ್ಯ ಬೆಳೆಸಲು ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಜಿ–7 ಶೃಂಗದ ನಂತರ ಮೋದಿ ಅವರು ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದು, ಅಧ್ಯಕ್ಷ ಜೋರನ್ ಮಿಲನೋವಿಕ್ ಮತ್ತು ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಭಾರತ ಮತ್ತು ಕ್ರೊಯೇಷಿಯಾ ಶತಮಾನಗಳಷ್ಟು ಹಳೆಯದಾದ ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಇದು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಅನುಕೂಲವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.