ಪ್ರಮೋದ್ ಸಾವಂತ್
(ಪಿಟಿಐ ಚಿತ್ರ)
ಪಣಜಿ: ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಒದಗಿಸುವ ಸಲುವಾಗಿ ‘ರಾಮ ನಿವಾಸ’ ನಿರ್ಮಿಸಲು ಗೋವಾ ಸರ್ಕಾರ ಭೂಮಿಯನ್ನು ಖರೀದಿಸಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಗೋವಾ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ‘ಗೋವಾ ರಾಮ ನಿವಾಸ’ ನಿರ್ಮಾಣಕ್ಕಾಗಿ ಭೂಮಿಯನ್ನು ಖರೀದಿಸಿದೆ ಎಂದು ಘೋಷಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಇದು ಶ್ರೀರಾಮನ ಭಕ್ತರಿಗೆ, ವಿಶೇಷವಾಗಿ ಗೋವಾದಿಂದ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಒದಗಿಸುವ ಸ್ಥಳವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಮುಂದೆ ನಿರ್ಮಿಸಲ್ಪಡುವ ‘ರಾಮ ನಿವಾಸ’ ಕಟ್ಟಡವು ಗೋವಾದ ಪರಶುರಾಮ ಭೂಮಿ ಮತ್ತು ಅಯೋಧ್ಯೆ ನಡುವಿನ ಆಧ್ಯಾತ್ಮಿಕ ಬಾಂಧವ್ಯವನ್ನು ಬಲಪಡಿಸುತ್ತದೆ. ಭಕ್ತಿ, ಸಂಸ್ಕೃತಿ ಮತ್ತು ಏಕತೆಯನ್ನು ಬೆಳೆಸುತ್ತದೆ ಎಂದು ಸಾವಂತ್ ಹೇಳಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ‘ಗೋವಾ ರಾಮ ನಿವಾಸ’ ವಾಸ್ತವ್ಯ ಸ್ಥಳವನ್ನು ಒದಗಿಸಲಿದೆ. ಈ ಉಪಕ್ರಮಕ್ಕೆ ಅನುಕೂಲ ಮಾಡಿಕೊಟ್ಟ ಉತ್ತರ ಪ್ರದೇಶ ‘ಆವಾಸ್ ಏವಂ ವಿಕಾಸ್ ಪರಿಷತ್’ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದಗಳು ಎಂದು ಸಾವಂತ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರದ ಕನಸನ್ನು ನನಸಾಗಿಸಿ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪುನಶ್ಚೇತನಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಾವಂತ್ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.