ADVERTISEMENT

ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಚುನಾವಣೆ: ದಾಖಲೆಯ ಮತದಾನಕ್ಕೆ ಮೋದಿ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2022, 2:09 IST
Last Updated 14 ಫೆಬ್ರುವರಿ 2022, 2:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಗೋವಾಗಳಲ್ಲಿ ಇಂದು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

‘ಉತ್ತರಾಖಂಡ, ಗೋವಾ ಹಾಗೂ ಉತ್ತರ ಪ್ರದೇಶಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ದಾಖಲೆಯ ಸಂಖ್ಯೆಯಲ್ಲಿ ಮತಚಲಾವಣೆ ಮಾಡಿ ಪ್ರಜಾಪ್ರಭುತ್ವದ ಉತ್ಸವವನ್ನು ಇನ್ನಷ್ಟು ಬಲಯುತಗೊಳಿಸಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಹಂತದಲ್ಲಿ ಉತ್ತರ ಪ್ರದೇಶದ 55 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಉತ್ತರಾಖಂಡ ಮತ್ತು ಗೋವಾ ವಿಧಾನಸಭೆಗೂ ಇಂದು ಮತದಾನ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಳ್ಳಲಿದೆ. ಉತ್ತರಾಖಂಡದಲ್ಲಿ 70 ಕ್ಷೇತ್ರಗಳಿದ್ದರೆ, ಗೋವಾದಲ್ಲಿ 40 ಕ್ಷೇತ್ರಗಳಿವೆ. ಈ ಮೂರೂ ರಾಜ್ಯಗಳಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರ ಇದೆ.

ADVERTISEMENT

‘ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಎಲ್ಲ ಗೌರವಾನ್ವಿತ ಮತದಾರರಿಗೆ ಅಭಿನಂದನೆಗಳು. ಮತದಾನವು ನಮ್ಮ ಹಕ್ಕು, ಕರ್ತವ್ಯವಾಗಿರುವುದರ ಜತೆಗೆ ರಾಷ್ಟ್ರ ಧರ್ಮವೂ ಹೌದು. ‘ಗಲಭೆ ಮುಕ್ತ ಮತ್ತು ಭಯ ಮುಕ್ತ ಹೊಸ ಉತ್ತರ ಪ್ರದೇಶ’ದ ಅಭಿವೃದ್ಧಿ ಪಯಣವನ್ನು ಮುಂದುವರಿಸುವುದಕ್ಕಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.