ADVERTISEMENT

ವಿವಿಧ ಯೋಜನೆಗಳ ಮೂಲಕ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ: ನರೇಂದ್ರ ಮೋದಿ

ಐಎಎನ್ಎಸ್
Published 8 ಮಾರ್ಚ್ 2022, 6:55 IST
Last Updated 8 ಮಾರ್ಚ್ 2022, 6:55 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಮಹಿಳೆಯರ ಘನತೆ ಮತ್ತು ಅವಕಾಶಕ್ಕೆ ಒತ್ತು ನೀಡುವುದರೊಂದಿಗೆ ತನ್ನ ವಿವಿಧ ಯೋಜನೆಗಳ ಮೂಲಕ ಭಾರತ ಸರ್ಕಾರವು ಮಹಿಳಾ ಸಬಲೀಕರಣದತ್ತ ಗಮನ ಹರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸರಣಿ ಟ್ವೀಟ್ ಮಾಡಿರುವ ಅವರು, 'ಮಹಿಳಾ ದಿನದ ಈ ಸಂದರ್ಭದಲ್ಲಿ, ನಮ್ಮ ನಾರಿ ಶಕ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಧನೆಗಳಿಗೆ ವಂದಿಸುತ್ತೇನೆ. ಭಾರತ ಸರ್ಕಾರವು ತನ್ನ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣದತ್ತ ಗಮನ ಹರಿಸಲಿದೆ' ಎಂದು ತಿಳಿಸಿದ್ದಾರೆ.

'ಆರ್ಥಿಕ ಒಳಗೊಳ್ಳುವಿಕೆಯಿಂದ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆಯಿಂದ ವಸತಿ, ಶಿಕ್ಷಣದಿಂದ ಉದ್ಯಮಶೀಲತೆ ಸೇರಿದಂತೆ ಭಾರತದ ಅಭಿವೃದ್ಧಿ ಪಯಣದಲ್ಲಿ ನಮ್ಮ ನಾರಿ ಶಕ್ತಿಯನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಈ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯುತ್ತವೆ' ಎಂದು ಅವರು ಹೇಳಿದರು.

ADVERTISEMENT

ಸಂಜೆ ಗುಜರಾತ್‌ನ ಕಛ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿರುವುದಾಗಿ ಪ್ರಧಾನಿ ಮಾಹಿತಿ ನೀಡಿದ್ದಾರೆ.

ಸಮಾಜದಲ್ಲಿ ಮಹಿಳಾ ಸಂತರ ಪಾತ್ರ ಮತ್ತು ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಯನ್ನು ಗುರುತಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಚ್‌ನ ಧೋರ್ಡೊದಲ್ಲಿ ನಡೆಯುವ ಸೆಮಿನಾರ್‌ನಲ್ಲಿ 500 ಕ್ಕೂ ಹೆಚ್ಚು ಮಹಿಳಾ ಸಂತರು ಭಾಗವಹಿಸಲಿದ್ದಾರೆ.

ಸಂಸ್ಕೃತಿ, ಧರ್ಮ, ಸ್ತ್ರೀ ಉನ್ನತಿ, ಭದ್ರತೆ, ಸಾಮಾಜಿಕ ಸ್ಥಾನಮಾನ ಮತ್ತು ಭಾರತದ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಕುರಿತ ಸೆಷನ್‌ಗಳನ್ನು ಈ ಸೆಮಿನಾರ್‌ ಒಳಗೊಂಡಿರುತ್ತದೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಜೊತೆಗೆ ಮಹಿಳೆಯರ ಸಾಧನೆಗಳ ಬಗ್ಗೆಯೂ ಚರ್ಚಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.