ADVERTISEMENT

ದೆಹಲಿ ಕಾಲ್ತುಳಿತ | ಜನರ ಜೀವ ಅಷ್ಟೊಂದು ಅಗ್ಗವಾಗಿದೆಯೇ?: ಕೇಂದ್ರದ ವಿರುದ್ಧ TMC

ಪಿಟಿಐ
Published 16 ಫೆಬ್ರುವರಿ 2025, 10:22 IST
Last Updated 16 ಫೆಬ್ರುವರಿ 2025, 10:22 IST
ಟಿಎಂಸಿ ಮತ್ತು ಬಿಜೆಪಿ
ಟಿಎಂಸಿ ಮತ್ತು ಬಿಜೆಪಿ   

ನವದೆಹಲಿ: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು ಎಂದು ಆರೋಪಿಸಿರುವ ತೃಣ ಮೂಲ ಕಾಂಗ್ರೆಸ್‌(ಟಿಎಂಸಿ), ಜನರ ಜೀವ ಅಷ್ಟೊಂದು ಅಗ್ಗವಾಗಿದೆಯೇ? ಎಂದು ಪ್ರಶ್ನಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟಿಎಂಸಿ ರಾಜ್ಯಸಭಾ ಉಪನಾಯಕಿ ಸಾಗರಿಕಾ ಘೋಷ್, ಸರ್ಕಾರವು ಜನರ ಜೀವದ ಜೊತೆ ನಿರ್ದಯವಾಗಿ ಆಟವಾಡುತ್ತಿದೆ. ದೆಹಲಿ ಕಾಲ್ತುಳಿತ ದುರಂತವು ಭೀಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ದುರಂತದಿಂದಾಗಿ ಮೋದಿ ಸರ್ಕಾರ ಆಡಳಿತ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಗರಿಷ್ಠ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ವೈಷ್ಣವ್ ಅವರಿಗೆ ಜವಾಬ್ದಾರಿಯ ಪ್ರಜ್ಞೆ ಇದ್ದರೆ, ಅವರು ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿಗೆ ಜನರ ಜೀವದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ, ಅವರು ಅಶ್ವಿನಿ ವೈಷ್ಣವ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಇದು ತಡೆಯಬಹುದಾಗಿದ್ದ ವಿಪತ್ತು, ಪವಿತ್ರ ಕುಂಭಮೇಳವನ್ನು ಮೋದಿ ಮತ್ತು ಯೋಗಿ ಸರ್ಕಾರವು ಸಾರ್ವಜನಿಕ ಸಂಪರ್ಕ ಚಟುವಟಿಕೆಯಾಗಿ ಪರಿವರ್ತಿಸಿದೆ. ಕುಂಭ ಮೇಳಕ್ಕೆ ಭಕ್ತರನ್ನು ಬರುವಂತೆ ವಿಡಿಯೊಗಳನ್ನು ಪೋಸ್ಟ್ ಮಾಡುವ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ವಿಫಲವಾಗಿತ್ತು. ಇದರ ಪರಿಣಾಮ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಅನೇಕ ಜನರು ಜೀವ ಕಳೆದುಕೊಂಡರು ಎಂದು ಘೋಷ್ ಕಿಡಿಕಾರಿದ್ದಾರೆ.

ಭಾರತೀಯ ರೈಲ್ವೆಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದು ಘೋಷ್ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತ ಅವಘಡದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವರು ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.