ADVERTISEMENT

ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ

ಪಿಟಿಐ
Published 26 ಡಿಸೆಂಬರ್ 2025, 7:40 IST
Last Updated 26 ಡಿಸೆಂಬರ್ 2025, 7:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಇಂದೋರ್: ಎಐನಿಂದ (ಕೃತಕ ಬುದ್ಧಿಮತ್ತೆ) ಕೆಲಸ ಕಳೆದುಕೊಂಡ 18 ವರ್ಷದ ಗ್ರಾಫಿಕ್ ಡಿಸೈನರ್ ಹಾಗೂ ಆತನ ಸ್ನೇಹಿತೆಯನ್ನು ₹ 16 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ADVERTISEMENT

2005ರಲ್ಲಿ ಬಿಡುಗಡೆಯಾದ ಬಾಲಿವುಡ್ ‘ಬಂಟಿ ಔರ್ ಬಬ್ಲಿ’ ಸಿನಿಮಾದಿಂದ ಪ್ರೇರಣೆ ಪಡೆದುಕೊಂಡು ಕೃತ್ಯ ಎಸಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಶ್ರೀಕೃಷ್ಣ ಲಾಲ್ ಚಂದಾನಿ ಹೇಳಿದ್ದಾರೆ.

ಇವರಿಬ್ಬರು ಡಿಸೆಂಬರ್ 22ರಂದು ಇಂದೋರ್‌ನ ರಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯೊಂದರಿಂದ ₹ 16.17 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರವನ್ನು ಕಳ್ಳತನ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರನ್ನು ಭೋಪಾಲದಲ್ಲಿ ಬಂಧಿಸಲಾಗಿದ್ದು, ಕಳ್ಳತನ ಮಾಡಿದ್ದ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಗುರುತನ್ನು ಬಹಿರಂಗಪಡಿಸಲು ಡಿಸಿಪಿ ನಿರಾಕರಿಸಿದ್ದು, ಇಬ್ಬರೂ 18 ವರ್ಷದವರು ಎಂದು ಹೇಳಿದ್ದಾರೆ. ಬಂಧಿತ ಗ್ರಾಫಿಕ್ ಡಿಸೈನರ್ ಆಗಿದ್ದು, ಆತನ ಸ್ನೇಹಿತೆ ನೀಟ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ತಾನು ಐಟಿ ಕಂಪನಿಯೊಂದರಲ್ಲಿ ಅರೆಕಾಲಿಕವಾಗಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾಗಿಯೂ, ಕಂಪನಿ ಎಐ ಅಳವಡಿಸಿಕೊಂಡ ಬಳಿಕ ಕೆಲಸ ಕಳೆದುಕೊಂಡದ್ದಾಗಿಯೂ, ಅದರಿಂದ ಖರ್ಚುಗಳನ್ನು ಭರಿಸಲು ಅಸಾಧ್ಯವಾಗಿತ್ತು ಎಂದೂ ವಿಚಾರಣೆ ವೇಳೆ ಹೇಳಿದ್ದಾನೆ.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಆರೋಪಿಗಳು, ‘ಬಂಟಿ ಔರ್ ಬಬ್ಲಿ’ ಚಿತ್ರ ನೋಡಿ ಕಳ್ಳತನಕ್ಕೆ ಯೋಜನೆ ಹಾಕಿಕೊಂಡಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

ಕಳ್ಳತನ ಮಾಡಿದ ಮಾಲುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದರಾದರೂ, ಇವರು ಮಕ್ಕಳೆಂದು ಖರೀದಿದಾರರು ಕಡಿಮೆ ಮೊತ್ತಕ್ಕೆ ಕೇಳಿದ್ದಾರೆ. ಹೀಗಾಗಿ ಕ್ರಿಸ್‌ಮಸ್ ಬಳಿಕ ಮಾರಾಟ ಮಾಡಲು ಯೋಜಿಸಿದ್ದರು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.