ADVERTISEMENT

Gujarat Bypoll | ಎಎಪಿ ಗೆಲುವು ಬಿಜೆಪಿಗೆ ಕಪಾಳಮೋಕ್ಷವಾಗಲಿದೆ: ಕೇಜ್ರಿವಾಲ್

ಸತೀಶ್ ಝಾ
Published 1 ಜೂನ್ 2025, 3:06 IST
Last Updated 1 ಜೂನ್ 2025, 3:06 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ಅಹಮದಾಬಾದ್‌: ಜುನಾಗಢ ಜಿಲ್ಲೆಯ ವಿಸಾವದರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಗೆಲುವು ಸಾಧಿಸಲಿದ್ದು, ಬಿಜೆಪಿಗೆ ಕಪಾಳಮೋಕ್ಷವಾಗಲಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.‌

ADVERTISEMENT

ಎಎಪಿ ಮುಖ್ಯಸ್ಥ ಕೇಜ್ರಿವಾಲ್‌ ಅವರು, ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಆತಿಶಿ ಅವರೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿ ಗೋಪಾಲ್‌ ಇಟಾಲಿಯಾ ಪರ ಶನಿವಾರ ರೋಡ್‌ ಶೋ ನಡೆಸಿದರು.

ಈ ವೇಳೆ ಮಾತನಾಡಿದ ಅವರು, 'ಬಿಜೆಪಿಗೆ ಇಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ, ನಮ್ಮ ಶಾಸಕರನ್ನು ಬೆದರಿಸಿ, ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗೆ ಮಾಡುವ ಮೂಲಕ ವಿಸಾವದರ ಮತದಾರರನ್ನು ಬಿಜೆಪಿ ಅವಮಾನಿಸಿದೆ. ಗೋಪಾಲ್‌ ಇಟಾಲಿಯಾ ಅವರಿಗೆ ಮತ ನೀಡುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ಅವರು ಬೇರೆಯವರಂತಲ್ಲ ಎಂದು ಭರವಸೆ ನೀಡುತ್ತೇನೆ' ಎಂದು ಜನರನ್ನುದ್ದೇಶಿಸಿ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಇಟಾಲಿಯಾ ಅವರ ಗೆಲುವು 'ಬಿಜೆಪಿಗೆ ಕಪಾಳಮೋಕ್ಷ'ವಾಗಲಿದೆ ಎಂದು ‍‍ಪ್ರತಿಪಾದಿಸಿದ ಕೇಜ್ರಿವಾಲ್‌, ಬಿಜೆಪಿಯು ದರೋಡೆಕೋರರ ಪಕ್ಷವಾದರೆ, ಕಾಂಗ್ರೆಸ್‌ ವಂಚಕರ ಗುಂಪು ಎಂದು ವಾಗ್ದಾಳಿ ನಡೆಸಿದ್ದಾರೆ.

ರೋಡ್‌ ಶೋ ಬಳಿಕ ಇಟಾಲಿಯಾ ಅವರು ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್, ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.

ಎಎಪಿಯಿಂದ ಚುನಾಯಿತರಾಗಿದ್ದ ಭೂಪೇಂದ್ರ ಭಯಾನಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ, ಉಪಚುನಾವಣೆ ನಿಗದಿಯಾಗಿದೆ. 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ 2022ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 17 ಕಡೆ ಹಾಗೂ ಎಎಪಿ ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಶಾಸಕರಾಗಿದ್ದ ಕರ್ಷನ್‌ ಸೋಳಂಕಿ ಅವರು ಮೃತಪಟ್ಟಿರುವ ಕಾರಣ, ಮಹಾಸೇನ ಜಿಲ್ಲೆಯ ಕಾಡಿ ಕ್ಷೇತ್ರಕ್ಕೂ ಉಪಚುನಾವಣೆ ಘೋಷಣೆಯಾಗಿದೆ.

ನಾಮಪತ್ರ ಸಲ್ಲಿಕೆಗೆ ಜೂನ್‌ 2 (ನಾಳೆ) ಕೊನೇ ದಿನ. ಜೂನ್‌ 19ರಂದು ಮತದಾನ ನಡೆಯಲಿದ್ದು, ಜೂನ್‌ 23ರದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.