ADVERTISEMENT

ಬೆಂಗಳೂರಿನಲ್ಲಿರುವ ವಿದೇಶಿ ಸೆಮಿಕಂಡಕ್ಟರ್‌ ಘಟಕಗಳು ನಮ್ಮ ರಾಜ್ಯದತ್ತ: ಗುಜರಾತ್

ಪಿಟಿಐ
Published 30 ಡಿಸೆಂಬರ್ 2023, 11:26 IST
Last Updated 30 ಡಿಸೆಂಬರ್ 2023, 11:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಅಹಮದಾಬಾದ್: ಭಾರತದ ಸೆಮಿಕಂಡಕ್ಟರ್‌ ತಯಾರಿಕೆಯ ಯೋಜನೆಗೆ ಪೂರಕವಾಗಿ ಗುಜರಾತ್ ಸರ್ಕಾರ 2022ರಲ್ಲಿ ಜಾರಿಗೆ ತಂದ ಸೆಮಿಕಂಡಕ್ಟರ್‌ ನೀತಿಯಿಂದಾಗಿ ನವದೆಹಲಿ ಮತ್ತು ಬೆಂಗಳೂರಿನಲ್ಲಿರುವ ಜಪಾನ್, ದಕ್ಷಿಣ ಕೊರಿಯಾದ ಹಲವು ಕಂಪನಿಗಳು ಗುಜರಾತ್‌ನತ್ತ ಆಸಕ್ತಿ ಹೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಸರ್ಕಾರ ಆಯೋಜಿಸಿರುವ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ 2024 ಸಮಾವೇಶದಲ್ಲಿ ಈ ವಿಷಯ ಹಂಚಿಕೊಂಡಿರುವ ಅಲ್ಲಿನ ಅಧಿಕಾರಿಗಳು, ‘ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ ಪೂರೈಕೆ ಸರಪಳಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಗುಜರಾತ್‌ನ ಸೆಮಿಕಂಡಕ್ಟರ್‌ ನೀತಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದರಿಂದ ಈ ಕ್ಷೇತ್ರದಲ್ಲಿ ಭಾರತದ ಆರ್ಥಿಕತೆ ಇನ್ನಷ್ಟು ಎತ್ತರಕ್ಕೆ ಏರಲಿದೆ’ ಎಂದಿದ್ದಾರೆ.

ADVERTISEMENT

ಚಿಪ್ ತಯಾರಿಕಾ ಕಂಪನಿ ಮೈಕ್ರಾನ್‌ ಟೆಕ್ನಾಲಜೀಸ್‌ 2.75 ಶತಕೋಟಿ ಡಾಲರ್‌ ಮೊತ್ತದ ಘಟಕವನ್ನು ಅಹಮದಾಬಾದ್‌ ಬಳಿಯ ಸನಂದಾದಲ್ಲಿ ತೆರೆಯುವ ನಿರ್ಧಾರ ಕೈಗೊಂಡಿದೆ. ಆ ಮೂಲಕ ಜಾಗತಿಕ ಕಂಪನಿಗಳನ್ನು ಗುಜರಾತ್ ಮತ್ತು ಸರ್ಕಾರದ ನೀತಿಗಳು ಆಕರ್ಷಿಸುತ್ತಿವೆ ಎಂದಿದ್ದಾರೆ.

ಜಪಾನ್ ಮತ್ತು ದಕ್ಷಿಣ ಕೊರಿಯಾದ ಹಲವು ಸೆಮಿಕಂಡಕ್ಟರ್‌ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಉದ್ದೇಶ ಹೊಂದಿವೆ. ಇದರೊಂದಿಗೆ ಜೋಡಣೆ, ಪ್ಯಾಕೇಜಿಂಗ್ ಮತ್ತು ತಯಾರಿಕಾ ಕ್ಷೇತ್ರದಲ್ಲೂ ಹೂಡಿಕೆ ಮಾಡಲಿವೆ ಎಂದಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಈ ಕುರಿತು ಪ್ರತಿಕ್ರಿಯಿಸಿ, ‘ಜಾಗತಿಕ ಮಟ್ಟದ ಹಲವು ಕಂಪನಿಗಳಿಗೆ ರಾಜ್ಯವು ಅತ್ಯಂತ ಪ್ರಮುಖ ಆಯ್ಕೆಯಾಗಿದೆ. ಇದರಿಂದ ಸನಂದಾ ಮತ್ತು ಗುಜರಾತ್ ಎರಡರ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ’ ಎಂದಿದ್ದಾರೆ.

‘ರಾಜ್ಯದ ಸೆಮಿಕಂಡಕ್ಟರ್ ನೀತಿಯು 2027ರವರೆಗೂ ಇರಲಿದೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟು 2 ಲಕ್ಷ ಉದ್ಯೋಗ ಸೃಜಿಸುವ ನಿರೀಕ್ಷೆ ಇದೆ. ಇದು ಕೇಂದ್ರ ಸರ್ಕಾರದ ಸೆಮಿಕಂಡಕ್ಟರ್ ಮಿಷನ್‌ನ ಭಾಗವಾಗಿ ರೂಪಗೊಂಡ ನೀತಿಯಾಗಿದೆ. ಮೈಕ್ರಾನ್ ಜತೆಗೆ, 30ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯಾರಂಭ ಮಾಡಲಿವೆ. ಇದೇ ಕ್ಷೇತ್ರದಲ್ಲಿ ಭಾರತದ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ ಸ್ಥಾಪಿಸುವ ಗುರಿಯೂ ಇದೆ’ ಎಂದು ಪಟೇಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.