ಡೇರ್ ಅಲ್ ಬಾಲಾ (ಗಾಜಾಪಟ್ಟಿ): ಹಮಾಸ್ ಬಂಡುಕೋರರ ಗುಂಪು ಮತ್ತೆ ಮೂವರು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಿದೆ. ಒಪ್ಪಂದದ ಭಾಗವಾಗಿ ಹಲವು ಪ್ಯಾಲೆಸ್ಟೀನ್ ಕೈದಿಗಳನ್ನು ಇಸ್ರೇಲ್ ಈಗಾಗಲೇ ಬಿಡುಗಡೆ ಮಾಡಿದೆ.
ಎಲಿ ಶರಾಬಿ (52), ಒಹಾದ್ ಬೆನ್ ಅಮಿ (56), ಒರ್ ಲೆವಿ (34) ಹಮಾಸ್ ಬಿಗಿಹಿಡಿತದಿಂದ ಬಿಡುಗಡೆಗೊಂಡ ಇಸ್ರೇಲ್ ಪ್ರಜೆಗಳು. ಹಮಾಸ್ ಬಂಡುಕೋರರು ವ್ಯಾನ್‌ವೊಂದರಲ್ಲಿ ಒತ್ತೆಯಾಳುಗಳನ್ನು ಕರೆತಂದು, ಡೇರ್ ಅಲ್ ಬಾಲಾ ನಗರದಲ್ಲಿ ಸಿದ್ದಪದಿಸಿದ್ದ ವೇದಿಕೆಯಲ್ಲಿ ರೆಡ್ ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಿಢೀರ್ ದಾಳಿ ನಡೆಸಿದ ದಿನ ಇವರನ್ನು ಅಪಹರಿಸಲಾಗಿತ್ತು.
ಇದರೊಂದಿಗೆ ಈವರೆಗೆ 18 ಒತ್ತೆಯಾಳುಗಳನ್ನು ಮತ್ತು 550ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ಕೈದಿಗಳನ್ನು ಬಿಡುಗಡೆ ಮಾಡಿದಂತಾಗಿದೆ.
ಯುದ್ಧಪೀಡಿತ ಗಾಜಾ ಪಟ್ಟಿಯಿಂದ ಪ್ಯಾಲೆಸ್ಟೀನ್ ನಾಗರಿಕರನ್ನು ‘ಶಾಶ್ವತವಾಗಿ’ ಬೇರೆಡೆ ಸ್ಥಳಾಂತರಿಸಬೇಕು ಎಂದು ಟ್ರಂಪ್ ಅವರು ಹೇಳಿದ್ದರು. ಟ್ರಂಪ್ ನಿಲುವನ್ನು ಇಸ್ರೇಲ್ ಸ್ವಾಗತಿಸಿತ್ತು. ಆದರೆ ಪ್ಯಾಲೆಸ್ಟೀನಿಯನ್ನರು ಮತ್ತು ಹಲವು ಅಂತರರಾಷ್ಟ್ರೀಯ ಸಮುದಾಯಗಳು ಪ್ರಸ್ತಾವವನ್ನು ತಿರಸ್ಕರಿಸಿದ್ದವು. ಈ ಭಿನ್ನಾಭಿಪ್ರಾಯವು ಕದನ ವಿರಾಮ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರಿದಂತೆ ತೋರುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.