ADVERTISEMENT

ಹರಿಯಾಣ: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಖಟ್ಟರ್

ಪಿಟಿಐ
Published 10 ಮಾರ್ಚ್ 2021, 14:04 IST
Last Updated 10 ಮಾರ್ಚ್ 2021, 14:04 IST
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (ಸಂಗ್ರಹ ಚಿತ್ರ)
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (ಸಂಗ್ರಹ ಚಿತ್ರ)   

ಚಂಡೀಗಡ: ಹರಿಯಾಣದಲ್ಲಿ ಬುಧವಾರದಂದು ವಿಶ್ವಾಸಮತ ಸಾಬೀತುಪಡಿಸಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರವನ್ನು ಭದ್ರಪಡಿಸಿದ್ದಾರೆ.

ಬಿಜೆಪಿ-ಜೆಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೆ ಈಗ ಅವಿಶ್ವಾಸ ಮತದಲ್ಲಿ ಸೋಲು ಅನುಭವಿಸುವ ಮೂಲಕ ಕಾಂಗ್ರೆಸ್ ಮುಖಭಂಗ ಎದುರಿಸಿದೆ.

ವಿಧಾನಸಭೆಯಲ್ಲಿ ಸರ್ಕಾರದ ಪರ 55 ಶಾಸಕರು ಮತ ಚಲಾಯಿಸಿದರೆ 32 ಮಂದಿ ವಿರೋಧಿಸಿದರು.

ADVERTISEMENT

ಸದನದಲ್ಲಿ ಆರು ತಾಸು ನಡೆದ ಸುದೀರ್ಘ ಪ್ರಶ್ನಾವಳಿಯ ಬಳಿಕ ಸ್ಪೀಕರ್ ಗ್ಯಾನ್ ಚಾಂದ್ ಗುಪ್ತಾ ವಿಶ್ವಾಸಮತ ನಿರ್ಣಯ ಸ್ವೀಕರಿಸಿದರು.

ಅವಿಶ್ವಾಸ ನಿರ್ಣಯ ವಿರೋಧಿಸಿದ 55 ಶಾಸಕರ ಪೈಕಿ ಬಿಜೆಪಿಯಿಂದ 39 ಹಾಗೂ ಮಿತ್ರ ಪಕ್ಷ ಜನನಾಯಕ್ ಜನತಾ ಪಕ್ಷದಿಂದ 10, ಐವರು ಪಕ್ಷೇತರರು ಮತ್ತು ಹರಿಯಾಣ ಲೋಕಹಿತ್ ಪಕ್ಷದಿಂದ ಒಬ್ಬರು ಸದಸ್ಯರು ಸೇರಿದ್ದಾರೆ.

ಕಾಂಗ್ರೆಸ್ ಪರ 30 ಮತ್ತು ಇಬ್ಬರು ಪಕ್ಷೇತರರು ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದರು.

90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ ಸದಸ್ಯರ ಬಲಾಬಲ 88 ಆಗಿದ್ದು, ಆಡಳಿತರೂಢ ಬಿಜೆಪಿಯಲ್ಲಿ 40 ಶಾಸಕರು, ಜೆಜೆಪಿ 10 ಮತ್ತು ಕಾಂಗ್ರೆಸ್‌ನ 30 ಶಾಸಕರನ್ನು ಒಳಗೊಂಡಿದೆ. ಏಳು ಮಂದಿ ಪಕ್ಷೇತರರ ಪೈಕಿ ಐವರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಲೋಕಹಿತ್ ಪಕ್ಷದ ಶಾಸಕರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ರೈತರ ಪ್ರತಿಭಟನೆ ನಡೆಯುತ್ತಿರುವಂತೆಯೇ ಹರಿಯಾಣದಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.