ADVERTISEMENT

ಕಂಗನಾ ಬಂಗಲೆ ಧ್ವಂಸ ಪ್ರಕರಣದ ತೀರ್ಪು ಕಾದಿರಿಸಿದ ಬಾಂಬೆ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 8:22 IST
Last Updated 5 ಅಕ್ಟೋಬರ್ 2020, 8:22 IST
ಕಂಗನಾ ರನೌತ್‌
ಕಂಗನಾ ರನೌತ್‌   

ಮುಂಬೈ: ಮುಂಬೈ ಪಾಲಿಕೆ ತಮ್ಮ ಬಂಗಲೆಯ ಒಂದು ಭಾಗವನ್ನು ಧ್ವಂಸಗೊಳಿಸಿದ್ದರ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರನೌಟ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿರುವ ಬಾಂಬೆ ಹೈಕೋರ್ಟ್‌ ತೀರ್ಪು ಕಾದಿರಿಸಿದೆ. ‌

ನ್ಯಾಯಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಆರ್ ಐ ಚಾಗ್ಲಾ ಅವರನ್ನು ಒಳಗೊಂಡ ನ್ಯಾಯಪೀಠವು ಕಳೆದ ವಾರ ಮನವಿಯ ವಿಚಾರಣೆಯನ್ನು ನಡೆಸಿತ್ತು‌.
ಪಾಲಿ ಹಿಲ್ ಪ್ರದೇಶದಲ್ಲಿನ ತನ್ನ ಬಂಗಲೆಯ ಒಂದು ಭಾಗವನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9 ರಂದು ರನೌತ್ ಅವರು ಹೈಕೋರ್ಟ್ ಮಟ್ಟಿಲೇರಿದ್ದರು. ಕಟ್ಟಡ ಧ್ವಂಸ ಮಾಡಿದ ಬಿಎಂಸಿಯ ನಡೆ ಕಾನೂನು ಬಾಹಿರ ಎಂದು ಘೋಷಿಸಬೇಕೆಂದೂ, ತಮಗೆ ₹2 ಕೋಟಿ ಪರಿಹಾರ ನೀಡುವಂತೆ ಬಿಎಂಸಿಗೆ ಸೂಚನೆ ನೀಡಬೇಕು ಎಂದೂ ಹೈಕೋರ್ಟ್‌ಗೆ ರನೌತ್‌ ಮನವಿ ಮಾಡಿದ್ದರು.

ಮುಂಬೈ ಪೊಲೀಸರ ವಿರುದ್ಧ ನಾನು ನೀಡಿದ್ದ ಹೇಳಿಕೆಯು ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರವನ್ನು ಕೆರಳಿತ್ತು. ಹೀಗಾಗಿ ಸರ್ಕಾರ ಬಿಎಂಸಿ ಮೂಲಕ ನನ್ನ ಮನೆ ನೆಲಸಮಗೊಳಿಸಿದೆ ಎಂದು ರನೌತ್‌ ಅವರು ತಮ್ಮ ವಕೀಲ ಡಾ ಬೀರೇಂದ್ರ ಸರಫ್‌ ಅವರ ಮೂಲಕ ಆರೋಪಿಸಿದ್ದರು. ಅಲ್ಲದೆ, ಶಿವಸೇನೆ ಸಂಸದ ಸಂಜಯ್‌ ರಾವುತ್‌ ಅವರು ಸಂದರ್ಶನದ ಮೂಲಕ ಬೆದರಿಕೆ ಹಾಕಿರುವುದಾಗಿಯೂ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ADVERTISEMENT

ಆದರೆ ರನೌತ್ ಅವರ ಆರೋಪಗಳನ್ನು ನಿರಾಕರಿಸಿರುವ ಬಿಎಂಸಿ, ರನೌತ್‌ ಅವರು ತಮ್ಮ ಬಂಗಲೆಯನ್ನು ನಿಯಮಕ್ಕೆ ವಿರುದ್ಧವಾಗಿ ನವೀಕರಣ ಮಾಡಿದ್ದರು. ಅಂಥ ಭಾಗವನ್ನು ಕೆಡವುವುದು ಬಿಎಂಸಿಯ ಶಾಸನ ಬದ್ಧ ಅಧಿಕಾರವಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.