ADVERTISEMENT

ಕಾಬೂಲ್‌ನಿಂದ ಭಾರತಕ್ಕೆ ವಾಪಸ್‌: ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದ ಏರ್‌ಪೋರ್ಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 10:50 IST
Last Updated 22 ಆಗಸ್ಟ್ 2021, 10:50 IST
ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಿಂದ ದೆಹಲಿಗೆ ಬಂದಿಳಿದ ಭಾರತೀಯರು –ಪಿಟಿಐ ಚಿತ್ರ
ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಿಂದ ದೆಹಲಿಗೆ ಬಂದಿಳಿದ ಭಾರತೀಯರು –ಪಿಟಿಐ ಚಿತ್ರ    

ನವದೆಹಲಿ: ತಾಲಿಬಾನ್‌ ವಶದಿಂದ ತಪ್ಪಿಸಿಕೊಂಡು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಬಂದಿಳಿದ ತನ್ನ ತಾಯಿ ಮತ್ತು ತಂಗಿಯನ್ನು ನೋಡಿದ ಅಕ್ಕನ ಕಣ್ಣಲ್ಲಿ ಆನಂದ ಬಾಷ್ಪ ಸುರಿಯುತ್ತಿದ್ದ ಹೃದಯಸ್ಪರ್ಶಿ ಸನ್ನಿವೇಶಕ್ಕೆ ಹಿಂಡನ್‌ ವಾಯುನೆಲೆ ಭಾನುವಾರ ಸಾಕ್ಷಿಯಾಯಿತು.

ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆ ವಿಶೇಷ ವಿಮಾನದ ಮೂಲಕ 168 ಮಂದಿಯನ್ನು ದೇಶಕ್ಕೆ ಕರೆತರಲಾಗಿದೆ. ಇವರಲ್ಲಿ 107 ಮಂದಿ ಭಾರತೀಯರಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ತಾಯಿಯ ಮಡಿಲಲ್ಲಿ ಕುಳಿತಿರುವ ತಂಗಿಯನ್ನು ನೋಡಿದ ಅಕ್ಕ ಸಂತೋಷದಿಂದ ನಗುತ್ತಾ ಆಕೆಯನ್ನು ಚುಂಬಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

‘ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ತಾಲಿಬಾನಿಗಳು ನಮ್ಮ ಮನೆಗಳನ್ನು ಸುಟ್ಟುಹಾಕಿದ್ದಾರೆ. ಅನೇಕರು ಉದ್ಯೋಗ, ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮಗೆ ಸಹಾಯ ಮಾಡಿದ್ದಕ್ಕಾಗಿ ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ’ ಎಂದು ಮಹಿಳೆಯೊಬ್ಬರು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಅಫ್ಗಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್‌ ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ 24 ಗಂಟೆಗಳಲ್ಲಿ ಕಾಬೂಲ್‌ನಿಂದ ಭಾರತ ಸುಮಾರು 400 ಜನರನ್ನು ಸ್ಥಳಾಂತರಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಅಫ್ಗಾನಿಸ್ತಾನದಲ್ಲಿ ನಿಯೋಜನೆಗೊಂಡಿದ್ದ ತನ್ನ ಭದ್ರತಾ ಪಡೆಗಳನ್ನು ಅಮೆರಿಕ ಹಿಂದಕ್ಕೆ ಪಡೆದಿದೆ. ಹೀಗಾಗಿ ದೇಶದಲ್ಲಿ ಮೇಲುಗೈ ಸಾಧಿಸಿರುವ ತಾಲಿಬಾನ್‌, ಅಲ್ಲಿನ ಸರ್ಕಾರವನ್ನು ಉರುಳಿಸಿ, ತನ್ನ ಆಡಳಿತ ಘೋಷಿಸಿಕೊಂಡಿದೆ. ಜತೆಗೆ, ಶರಿಯಾ ಕಾನೂನಿನ ಅಡಿಯಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.