ಪುಣೆ: ಮಲಗುವ ಕೋಣೆಯಲ್ಲಿ ರಹಸ್ಯ ಕ್ಯಾಮರಾ ಇರಿಸಿ, ವರದಕ್ಷಿಣೆ ಕೊಡದಿದ್ದರೆ ಖಾಸಗಿ ವಿಡಿಯೊಗಳನ್ನು ಬಹಿರಂಗ ಪಡಿಸುವುದಾಗಿ ಪತಿಯು ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ಕಾರಿ ಅಧಿಕಾರಿಯಾಗಿರುವ ಪತಿ, ಮನೆಯ ಶೌಚಾಲಯದಲ್ಲೂ ಕ್ಯಾಮರಾ ಅಳವಡಿಸಿದ್ದಾರೆ ಎಂದು 31 ವರ್ಷದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನ ಕಂತುಗಳನ್ನು ಪಾವತಿಸಲು ತವರು ಮನೆಯಿಂದ ₹1.5 ಲಕ್ಷ ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಪತಿ ಹಾಗೂ ಆತನ ಕುಟುಂಬದವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ವರದಕ್ಷಿಣೆ ನೀಡದಿದ್ದರೆ ಖಾಸಗಿ ವಿಡಿಯೊಗಳನ್ನು ದುರ್ಬಳಕೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಮಹಿಳೆಯ ದೂರಿನ ಆಧಾರದಲ್ಲಿ ಪತಿ, ಅತ್ತೆ ಹಾಗೂ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.