ADVERTISEMENT

ಹೊಸ ಐಟಿ ನಿಯಮಗಳಿಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಪಿಟಿಐ
Published 28 ಜೂನ್ 2021, 11:03 IST
Last Updated 28 ಜೂನ್ 2021, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ(ಪಿಟಿಐ): ಡಿಜಿಟಲ್ ಸುದ್ದಿ ಮಾಧ್ಯಮಗಳ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಡೆ ನೀಡುವುದಕ್ಕೆ ದೆಹಲಿ ಹೈಕೋರ್ಟ್‌ನಿರಾಕರಿಸಿದೆ.

ಈ ಹಂತದಲ್ಲಿ ಇಂತಹ ಆದೇಶವನ್ನು ಹೊರಡಿಸುತ್ತೇವೆಂದು ಅರ್ಜಿದಾರರೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರ ಡಿಜಿಟಲ್ ಸುದ್ದಿ ಮಾಧ್ಯಮಗಳ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಹೊಸ ಐಟಿ ಕಾಯ್ದೆ, ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021ಕ್ಕೆ ತಡೆ ನೀಡುವಂತೆ ಕೋರಿ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ, ದಿ ವೈರ್, ಕ್ವಿಂಟ್ ಡಿಜಿಟಲ್ ಮೀಡಿಯಾ ಲಿಮಿಟೆಡ್ ಮತ್ತು ಆಲ್ಟ್ ನ್ಯೂಸ್‌ನ ಮೂಲ ಕಂಪನಿಯಾದ ಪ್ರವ್ಡಾ ಮೀಡಿಯಾ ಫೌಂಡೇಶನ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದವು.

ADVERTISEMENT

‘ಹೊಸ ಐಟಿ ಕಾಯ್ದೆಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿ ಕೇಂದ್ರ ಸರ್ಕಾರ ಈ ಕಂಪನಿಗಳಿಗೆ ನೋಟಿಸ್ ನೀಡಿತ್ತು. ಒಂದೊಮ್ಮೆ ಅನುಸರಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಕಾಯ್ದೆಗೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು.

‘ಹೊಸ ಅಧಿಸೂಚನೆಯ ಅಂಶಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಆ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ‘ ಎಂದು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ರಜಾಕಾಲದ ಪೀಠ ತಿಳಿಸಿದೆ.

‘ನಾವು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ನೀವು ಬಯಸಿದರೆ ತಾರ್ಕಿಕವಾದ ಆದೇಶವನ್ನು ನೀಡುತ್ತೇವೆ ಅಥವಾ ಮರುಸೂಚನೆ ನೀಡಿ ರೋಸ್ಟರ್ ಪೀಠಕ್ಕೆ ವರ್ಗಾಯಿಸುತ್ತೇವೆ. ನೀವು ಸೂಚನೆಗಳನ್ನು ತೆಗೆದುಕೊಂಡು, ನಮಗೆ ತಿಳಿಸಿ‘ ಎಂದು ನ್ಯಾಯಪೀಠ ಹೇಳಿದೆ.

ಕಂಪನಿಗಳ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್‌ ಅವರು , ‘ನ್ಯಾಯಾಲಯಗಳ ರಜೆ ಮುಗಿದ ಮೇಲೆ, ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಪೀಠವನ್ನು ಕೋರಿದರು.

ಐಟಿ ಕಾಯ್ದೆ ತಡೆಗಾಗಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 7ರಂದು ರೋಸ್ಟರ್ ಪೀಠದ ಎದುರಲ್ಲಿರುವ ಪ್ರಕರಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.