ಪ್ರಾತಿನಿಧಿಕ ಚಿತ್ರ
ತಿರುವನಂತಪುರ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸೂರ್ಯನ ಕಿರಣಗಳಿಂದ ಬರುವ ನೇರಳಾತೀತ ವಿಕಿರಣದ ಮಟ್ಟದಲ್ಲಿ ಏರಿಕೆಯಾಗಿರುವ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ 11 ಅಂಶದಷ್ಟು ವಿಕಿರಣಗಳು ಪತ್ತೆಯಾಗಿದೆ. ಇದು ಸುಡುವಿಕೆ, ಚರ್ಮದ ಕಾಯಿಲೆಗಳು, ಕಣ್ಣಿಗೆ ಸಂಬಂಧಿತ ರೋಗಗಳು ಸೇರಿ ಹಲವು ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡಲಿವೆ. ಹೀಗಾಗಿ ನೇರವಾಗಿ ಸೂರ್ಯ ಬಿಸಿಲಿಗೆ ಮೈ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ವಿಕಿರಣ ಮಟ್ಟ ಪತ್ತೆ ಮಾಡುವ ಸಾಧನವನ್ನು ಪಾಲಕ್ಕಾಡ್‌ನ ಹಲವೆಡೆ ಸ್ಥಾಪಿಸಲಾಗಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಹಾನಿಗೊಳಿಸುವ ವಿಕಿರಣಗಳು ಪತ್ತೆಯಾಗಿವೆ. ಬಿಸಿಲಿನಲ್ಲಿ ಕೆಲಸ ಮಾಡುವವರು, ಮೀನುಗಾರರು, ಬೈಕ್‌ಗಳಲ್ಲಿ ಓಡಾಡುವವರು, ಪ್ರವಾಸಿಗರು ಎಚ್ಚರಿಕೆಯಿಂದಿರಿ. ಅದರಲ್ಲೂ ಕ್ಯಾನ್ಸರ್, ಚರ್ಮದ ಸಮಸ್ಯೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಕಾಳಜಿವಹಿಸಿ ಎಂದು ಸೂಚಿಸಿದೆ.
ದೇಹದ ಬಹುಭಾಗ ಮುಚ್ಚುವ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನೇ ಧರಿಸಿ, ಮನೆಯಿಂದ ಹೊರಹೋಗುವಾಗ ಟೋಪಿ, ಛತ್ರಿ, ತಂಪು ಕನ್ನಡಕ ಧರಿಸಿ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.