ADVERTISEMENT

ಐಐಎಸ್ಸಿ ಅತ್ಯುತ್ತಮ ವಿಶ್ವವಿದ್ಯಾಲಯ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರ‍್ಯಾಂಕಿಂಗ್‌

ಪಿಟಿಐ
Published 8 ಏಪ್ರಿಲ್ 2019, 20:00 IST
Last Updated 8 ಏಪ್ರಿಲ್ 2019, 20:00 IST
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ   

ನವದೆಹಲಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎನ್ನುವ ಕೀರ್ತಿಗೆ ಪಾತ್ರವಾಗಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಯನ್ನು ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಮದ್‌ ಬಿಡುಗಡೆ ಮಾಡಿದರು.

ಒಟ್ಟಾರೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಐಐಟಿ ಮದ್ರಾಸ್‌ ಅಗ್ರಸ್ಥಾನದಲ್ಲಿದೆ. ಐಐಎಸ್ಸಿ ಬೆಂಗಳೂರು ಮತ್ತು ಐಐಟಿ ದೆಹಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಮೊದಲ ಹತ್ತು ಸಂಸ್ಥೆಗಳಲ್ಲಿ ಏಳು ಐಐಟಿಗಳು ಸೇರಿವೆ.

ADVERTISEMENT

ರಾಷ್ಟ್ರೀಯ ಸಾಂಸ್ಥಿಕ ಸ್ಥಾನಮಾನ ನಿರ್ಧರಿಸುವ ಸಂಸ್ಥೆಯ (ಎನ್‌ಐಆರ್‌ಎಫ್‌)ವರದಿ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.

ವಿಶ್ವವಿದ್ಯಾಲಯ ವಿಭಾಗದಲ್ಲಿ ಐಐಎಸ್ಸಿ ಮೊದಲ ಸ್ಥಾನದಲ್ಲಿದ್ದರೆ, ಜವಾಹರಲಾಲ್‌ ನೆಹರೂ ವಿಶ್ವಿದ್ಯಾಲಯ (ಜೆಎನ್‌ಯು) ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ನಂತರದ ಸ್ಥಾನಗಳಲ್ಲಿವೆ.

ಕಾಲೇಜು ವಿಭಾಗದಲ್ಲಿ ದೆಹಲಿಯ ಮಿರಂದಾ ಹೌಸ್‌ ಉನ್ನತ ಸ್ಥಾನ ಪಡೆದಿದೆ. ಎರಡುಮತ್ತು ಮೂರನೇ ಸ್ಥಾನವನ್ನು ಚೆನ್ನೈನ ಹಿಂದೂ ಕಾಲೇಜ್‌ ಮತ್ತು ಪ್ರೆಸಿಡೆನ್ಸಿ ಕಾಲೇಜು ಪಡೆದುಕೊಂಡಿವೆ.

ಫಾರ್ಮಸಿ ವಿಭಾಗದಲ್ಲಿ ಜಮಿಯಾ ಹಮ್‌ದರ್ದ್‌ ಸಂಸ್ಥೆಯನ್ನು ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಘೋಷಿಸಲಾಗಿದೆ.

ಬೆಂಗಳೂರಿನ ಐಐಎಂ, ಕಾನೂನು ಶಾಲೆ ಅತ್ಯುತ್ತಮ
ಮ್ಯಾನೇಜಮೆಂಟ್‌ ಕಾಲೇಜುಗಳಲ್ಲಿ ಬೆಂಗಳೂರಿನ ಐಐಎಂ ಪ್ರಥಮ ಸ್ಥಾನ ಪಡೆದಿದೆ. ರ‍್ಯಾಂಕಿಂಗ್‌ ಪಟ್ಟಿಯ ಮೊದಲ ಆರು ಸ್ಥಾನಗಳನ್ನು ಐಐಎಂಗಳೇ ಪಡೆದಿವೆ. ಐಐಟಿ ದೆಹಲಿ, ಮುಂಬೈ ಮತ್ತು ರೂರ್ಕಿ ಸಂಸ್ಥೆಗಳು ಸಹ ಮೊದಲ 10 ಸ್ಥಾನಗಳಲ್ಲಿವೆ.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಅತ್ಯುತ್ತಮ ಕಾನೂನು ಶಾಲೆ ಮತ್ತು ವೈದ್ಯಕೀಯ ಕಾಲೇಜು ಎಂದು ಪರಿಗಣಿಸಲಾಗಿದೆ.

ಮೈಸೂರು ವಿ.ವಿ.ಗೆ 54ನೇ ರ‍್ಯಾಂಕ್‌
ಮೈಸೂರು:
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಸಾಂಸ್ಥಿಕ ಸ್ಥಾನಮಾನ ನಿರ್ಧರಿಸುವ ಸಂಸ್ಥೆ (ಎನ್ಐಆರ್‌ಎಫ್) ಮೈಸೂರು ವಿಶ್ವವಿದ್ಯಾಲಯಕ್ಕೆ 54ನೇ ರ‍್ಯಾಂಕ್‌ ನೀಡಿದೆ.

ನವದೆಹಲಿ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರ‍್ಯಾಂಕ್‌ ಪಟ್ಟಿ ಪ್ರಕಟಿಸಲಾಗಿದ್ದು, ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಪ್ರಮಾಣಪತ್ರ ಸ್ವೀಕರಿಸಿದರು.

ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ರ್‍ಯಾಂಕ್‌ ಪಡೆದಿರುವ ಏಕೈಕ ವಿ.ವಿ ಇದಾಗಿದೆ. ದೇಶದ ಎಲ್ಲ ವಿ.ವಿ.ಗಳ ಪೈಕಿ 54ನೇ ರ‍್ಯಾಂಕ್, ಎಲ್ಲ ಶೈಕ್ಷಣಿಕ ಸಂಸ್ಥೆಗಳ ಪೈಕಿ 80ನೇ ರ‍್ಯಾಂಕ್ ಲಭಿಸಿದೆ. ರಾಜ್ಯದ ವಿ.ವಿ.ಗಳ ಪೈಕಿ 1ನೇ‌ ರ‍್ಯಾಂಕ್‌ ಸಿಕ್ಕಿದೆ. ದೇಶದ ಒಟ್ಟು 4,867 ಸಂಸ್ಥೆಗಳನ್ನು ‘ಎನ್ಐಆರ್‌ಎಫ್’ ಅಧ್ಯಯನಕ್ಕೆ ಒಳ‍ಪಡಿಸಿತ್ತು.

ಬೋಧನೆ, ಕಲಿಕೆ, ಸಂಶೋಧನೆ, ವೃತ್ತಿಪರತೆ, ಪದವೀಧರರ ಪ್ರಮಾಣ, ಗ್ರಹಿಕೆ ಮಾನದಂಡಗಳನ್ನು ಅಧ್ಯಯನ ಮಾಡಿ ರ‍್ಯಾಂಕ್‌ಗಳನ್ನು ನೀಡಲಾಗಿದೆ.

*
ಶಿಕ್ಷಣದ ಗುಣಮಟ್ಟ ಇನ್ನೂ ಆತಂಕದ ವಿಷಯವಾಗಿದೆ. ಆದರೂ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ಕೃಷ್ಟ ಸಂಸ್ಥೆಗಳಿರುವುದು ಆಶಾದಾಯಕವಾಗಿದೆ.
-ರಾಮನಾಥ ಕೋವಿಂದ್‌,ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.