ADVERTISEMENT

ತನಿಖೆಗೆ ಅಡ್ಡಿ | ಪ್ರಮುಖ ಸಾಕ್ಷ್ಯ ಹೊತ್ತೊಯ್ದ ಮಮತಾ: ಜಾರಿ ನಿರ್ದೇಶನಾಲಯ ಅರೋಪ 

ಪಿಟಿಐ
Published 8 ಜನವರಿ 2026, 11:34 IST
Last Updated 8 ಜನವರಿ 2026, 11:34 IST
   

ನವದೆಹಲಿ/ ಕೋಲ್ಕತ್ತ: ‘ನಮ್ಮ ಅಧಿಕಾರಿಗಳು ಪ್ರತೀಕ್ ಜೈನ್‌ ಅವರ ನಿವಾಸದಲ್ಲಿ ಶೋಧ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಡತಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ.

ಇ.ಡಿ ಅಧಿಕಾರಿಗಳು ಗುರುವಾರ ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್‌’ನ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರು ದಿಢೀರನೆ ಧಾವಿಸಿ ಬಂದಿದ್ದಾರೆ. 

‘ಮಮತಾ ಅವರು ಜೈನ್‌ ಅವರ ನಿವಾಸದಿಂದ ‘ಐ-ಪ್ಯಾಕ್’ ಕಚೇರಿಗೂ ಬಂದರು. ತಮ್ಮ ಆಪ್ತರು ಮತ್ತು ಪೊಲೀಸ್‌ ಅಧಿಕಾರಿಗಳ ನೆರವಿನಿಂದ ಅಲ್ಲಿಂದಲೂ ಕಡತಗಳು ಹಾಗೂ ಎಲೆಕ್ಟ್ರಾನಿಕ್‌ ಸಾಕ್ಷ್ಯಗಳನ್ನು ಕೊಂಡೊಯ್ದರು. ಮಮತಾ ಮತ್ತು ಕೋಲ್ಕತ್ತ ಪೊಲೀಸ್‌ ಆಯುಕ್ತರ ನಡೆ, ತನಿಖೆಗೆ ಅಡ್ಡಿ ಉಂಟುಮಾಡಿದೆ’ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಮಮತಾ ಅವರು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬರುವವರೆಗೂ ಶೋಧ ಕಾರ್ಯಾಚರಣೆ ಸುಗಮವಾಗಿ ಮತ್ತು ವೃತ್ತಿಪರವಾಗಿ ನಡೆಯುತ್ತಿತ್ತು’ ಎಂದಿದೆ.

‘ಈ ಶೋಧವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆಗಿದ್ದು, ಯಾವುದೇ ರಾಜಕೀಯ ಸಂಸ್ಥೆಯನ್ನು ಗುರಿಯಾಗಿರಿಸಿಕೊಂಡಿಲ್ಲ. ಯಾವುದೇ ಪಕ್ಷದ ಕಚೇರಿಯಲ್ಲಿ ಶೋಧ ನಡೆಸಿಲ್ಲ’ ಎಂದು ಹೇಳಿದೆ.

ಇಂಡಿಯನ್‌ ಪೊಲಿಟಿಕ್‌ ಆ್ಯಕ್ಷನ್‌ ಕಮಿಟಿಯನ್ನು (ಐ–ಪ್ಯಾಕ್‌) ಪ್ರಶಾಂತ್‌ ಕಿಶೋರ್‌ ಅವರು 2014ರ ಲೋಕಸಭೆ ಚುನಾವಣೆಗೆ ಮುನ್ನ ಸ್ಥಾಪಿಸಿದ್ದರು. ‘ಜನ ಸುರಾಜ್‌’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ ಬಳಿಕ ಅವರು ‘ಐ–ಪ್ಯಾಕ್‌’ನಿಂದ ಹೊರಬಂದಿದ್ದರು. ಈ ರಾಜಕೀಯ ಸಲಹಾ ಸಂಸ್ಥೆಯು 2019ರ ಲೋಕಸಭಾ ಚುನಾವಣೆಯ ನಂತರ ಟಿಎಂಸಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.