ADVERTISEMENT

ಉದ್ಯಮಿ ಮುಕೇಶ್ ಅಂಬಾನಿ ಪತ್ನಿ, ಮೂವರು ಮಕ್ಕಳಿಗೆ ಐಟಿ ನೋಟಿಸ್

ಕಪ್ಪುಹಣ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 11:08 IST
Last Updated 14 ಸೆಪ್ಟೆಂಬರ್ 2019, 11:08 IST
   

ಮುಂಬೈ:ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತು ಮೂವರು ಮಕ್ಕಳಿಗೆ ಆದಾಯ ತೆರಿಗೆ ಇಲಾಖೆಯು (ಐಟಿ) 2015ರ ಕಪ್ಪುಹಣ ನಿಯಂತ್ರಣ ಕಾಯ್ದೆ ಅನ್ವಯ ನೋಟಿಸ್ ನೀಡಿದೆ.

ವಿದೇಶಿ ಆದಾಯ ಮತ್ತು ಸ್ವತ್ತುಗಳ ಬಗ್ಗೆ ಮಾಹಿತಿ ನೀಡದಿರುವ ವಿಚಾರದಲ್ಲಿ ಇಲಾಖೆ ಕ್ರಮ ಕೈಗೊಂಡಿದೆ. ಮಾರ್ಚ್‌ 28ರಂದೇ ನೋಟಿಸ್ ನೀಡಲಾಗಿತ್ತು ಎಂದುದಿ ಇಂಡಿಯನ್ ಎಕ್ಸ್‌ಪ್ರೆಸ್ವರದಿ ಮಾಡಿದೆ.

2011ರಲ್ಲಿ ಜಿನೇವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವ ಸುಮಾರು 7,00 (ಉದ್ಯಮ ಸಂಸ್ಥೆಗಳೂ ಸೇರಿ) ಮಂದಿಯ ವಿವರಗಳು ಸರ್ಕಾರಕ್ಕೆ ದೊರೆತ ಬಳಿಕ ಐಟಿ ತನಿಖೆ ಆರಂಭಿಸಲಾಗಿದೆ. ಈ ಪೈಕಿ ಅಂಬಾನಿ ಅವರ ರಿಲಯನ್ಸ್‌ ಗ್ರೂಪ್‌ಗೆ ಸೇರಿದ 14 ಖಾತೆಗಳಿವೆ ಎಂಬುದು ಐಟಿ ತನಿಖೆಯಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ADVERTISEMENT

ನೇರ ತೆರಿಗೆಯ ಕೇಂದ್ರ ಮಂಡಳಿಯ ಉನ್ನತ ಅಧಿಕಾರಿಗಳು ಮತ್ತು ಮುಂಬೈ ಘಟಕದ ನಡುವೆ ಸುದೀರ್ಘ ಚರ್ಚೆ ನಡೆದ ಬಳಿಕ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡುವುದಕ್ಕೂ ಕೆಲವೇ ದಿನಗಳ ಮುನ್ನವಷ್ಟೇ ಆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ನೋಟಿಸ್ ನೀಡಿರುವ ವಿಚಾರವನ್ನು ರಿಲಯನ್ಸ್‌ ಇಂಡಸ್ಟ್ರೀಸ್ ವಕ್ತಾರರು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.