ADVERTISEMENT

ಕೋವಿಡ್‌ ವಿರುದ್ಧ ಹೋರಾಟ | ವೈದ್ಯರಿಗೆ ವೇತನ ಪಾವತಿಸುವಂತೆ ‘ಸುಪ್ರೀಂ’ ‌ಸೂಚನೆ

ಪಿಟಿಐ
Published 12 ಜೂನ್ 2020, 9:21 IST
Last Updated 12 ಜೂನ್ 2020, 9:21 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ:ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ತೊಡಗಿರುವ ವೈದ್ಯರಿಗೆ ವೇತನ ಬಾಕಿ ಉಳಿಸಿರುವುದು ಹಾಗೂ ವ್ಯವಸ್ಥಿತ ವಸತಿ ಸೌಲಭ್ಯ ನೀಡದಿರುವ ಸರ್ಕಾರದ ಧೋರಣೆ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

‘ಯುದ್ಧಕಾಲದಲ್ಲಿ ಸೈನಿಕರಿಗೆ ಬೇಸರ ಆಗಬಾರದು. ಅವರ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಸಂಪನ್ಮೂಲ ವ್ಯಯಿಸಬೇಕು‘ ಎಂದೂ ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿತು.

ಆರೋಗ್ಯ ಸೇವಾ ಕಾರ್ಯಕರ್ತರ ವೇತನ ಪಾವತಿ ಕುರಿತಂತೆ ಕೋರ್ಟ್‌ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು. ಸರ್ಕಾರ ಕೂಡಲೇ ಇದನ್ನು ಇತ್ಯರ್ಥಪಡಿಸಬೇಕು ಎಂದು ತಾಕೀತು ಮಾಡಿತು.

ADVERTISEMENT

ಕೋವಿಡ್‌ ವಿರುದ್ಧದ ಸೇವೆಯಲ್ಲಿ ತೊಡಗಿರುವ ವೈದ್ಯರಿಗೆ ಸಕಾಲದಲ್ಲಿ ವೇತನ ನೀಡುತ್ತಿಲ್ಲ ಎಂದು ದೂರಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್ ನಡೆಸಿತು. ಅಲ್ಲದೆ, 14 ದಿನ ಕ್ವಾರಂಟೈನ್ ಕಡ್ಡಾಯವಲ್ಲ ಎಂಬ ಕೇಂದ್ರದ ತೀರ್ಮಾನವನ್ನು ವೈದ್ಯರು ಪ್ರಶ್ನಿಸಿದ್ದರು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್‌, ಎಸ್.ಕೆ.ಕೌಲ್‌, ಎಂ.ಆರ್‌.ಶಾ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.ಕೇಂದ್ರದ ಪರ ಸಾಲಿಸಿಟರ್‌ ಜನರಲ್‌ ತುಶಾರ್‌ ಮೆಹ್ತಾ ಹಾಜರಿದ್ದರು.

ವೈದ್ಯರಿಗೆ ವೇತನ ಪಾವತಿ ಆಗುತ್ತಿಲ್ಲ. ಅವರು ಧರಣಿ ಮಾಡುತ್ತಿರುವ ವರದಿಗಳಿವೆ. ದೆಹಲಿಯಲ್ಲಿ ಕೆಲವರಿಗೆ ಕಳೆದ ಮೂರು ತಿಂಗಳಿನಿಂದ ವೇತನ ದೊರೆತಿಲ್ಲ. ಇಂಥ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು ಎಂದು ಕೋರ್ಟ್ ಸಲಹೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.