ADVERTISEMENT

ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಆಪ್ತರ ಮನೆಗಳ ಮೇಲೆ ಐಟಿ ದಾಳಿ

ಏಜೆನ್ಸೀಸ್
Published 9 ಮೇ 2019, 16:50 IST
Last Updated 9 ಮೇ 2019, 16:50 IST
   

ನವದೆಹಲಿ/ ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಮುಂಜಾನೆ ದಾಳಿ ಮಾಡಿದ್ದಾರೆ. ದೆಹಲಿ ಮತ್ತು ಮಧ್ಯಪ್ರದೇಶದ ಭೋಪಾಲ್‌ ಸೇರಿದಂತೆ ಹಲವು ಕಡೆಗಳಲ್ಲಿ ತೆರಿಗೆ ಅಧಿಕಾರಿಗಳು ಜಾಲಾಡುತ್ತಿದ್ದು ಈ ವರೆಗೆ ₹9 ಕೋಟಿ ಹಣ ಪತ್ತೆಯಾಗಿದೆ ಎನ್ನಲಾಗಿದೆ.

ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರದ ನೇತೃತ್ವ ವಹಿಸಿರುವ ಕಮಲ್‌ನಾಥ್‌ ಅವರ ಮಾಜಿ ಆಪ್ತ ಕಾರ್ಯದರ್ಶಿ ಪ್ರವೀಣ್‌ ಕಕ್ಕರ್‌ ಅವರ ಇಂದೋರ್‌ನಲ್ಲಿರುವ ನಿವಾಸ ಸೇರಿದಂತೆ ಕಚೇರಿಗಳು ಮತ್ತು ಸಲಹೆಗಾರ ರಾಜೇಂದ್ರ ಕುಮಾರ್ ಮಿಗ್ಲಾನಿ ಅವರ ದೆಹಲಿಯ ಗ್ರೀನ್‌ ಪಾರ್ಕ್‌ನಲ್ಲಿರುವ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.

ದೆಹಲಿಯಿಂದ ಬಂದಿದ್ದ 15 ಮಂದಿ ಅಧಿಕಾರಿಗಳು ಭಾನುವಾರ ಮುಂಜಾನೆ ಮೂರು ಗಂಟೆ ಸುಮಾರಿನಲ್ಲಿ ಮೊದಲಿಗೆ ಇಂದೋರ್‌ನ ವಿಜಯನಗರದಲ್ಲಿರುವ ಪ್ರವೀಣ್‌ ಕಕ್ಕರ್‌ ಅವರ ನಿವಾಸ ಪ್ರವೇಶಿಸಿದ್ದಾರೆ. ನಂತರ ಇದೇ ಪ್ರದೇಶದಲ್ಲಿದ್ದ ಕಕ್ಕರ್‌ ಅವರ ಕಚೇರಿ, ವ್ಯಾಪಾರ ಸ್ಥಳಗಳಲ್ಲೂ ಅಧಿಕಾರಿಗಳು ಜಾಲಾಟ ನಡೆಸಿದ್ದಾರೆ. ನಂತರ ದೆಹಲಿಯಲ್ಲಿರುವ ಮಿಗ್ಲಾನಿ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಈ ಇಬ್ಬರೂ, ಚುನಾವಣೆ ಹಿನ್ನೆಲೆಯಲ್ಲಿ ಹಣವನ್ನು ಹವಾಲಾ ಮಾರ್ಗದ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಚುನಾವಣೆ ನೀತಿ ಸಂಹಿತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ಆಪ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಇದಕ್ಕೂ ಮೊದಲು ಕರ್ನಾಟಕದಲ್ಲಿಯೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ನಡೆಯುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಒಂದು ದಿನ ಮೊದಲೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಮರುದಿನ ಬೆಳಗ್ಗೆ ಮಂಡ್ಯ, ಹಾಸನದ ಜೆಡಿಎಸ್‌ ಮುಖಂಡರು ಮತ್ತು ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ಚುನಾವಣಾ ಸಂದರ್ಭದ ಈ ದಾಳಿ ಖಂಡಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಬೆಂಗಳೂರಿನ ಐಟಿ ಕಚೇರಿಯ ಎದುರು ಸಾಂಕೇತಿಕಪ್ರತಿಭಟನೆಯನ್ನು ನಡೆಸಿದ್ದರು. ಮೋದಿ ಸರ್ಕಾರ ವಿರೋಧಿಗಳನ್ನು ಹಣಿಯವ ಅಸ್ತ್ರವಾಗಿಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದೆಎಂದು ಕಾಂಗ್ರೆಸ್‌ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.