ADVERTISEMENT

ಭಾರತ ನಿರಂಕುಶಾಧಿಕಾರಿ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟಿದೆ: ರಾಹುಲ್ ಗಾಂಧಿ

ಪಿಟಿಐ
Published 12 ಮಾರ್ಚ್ 2021, 12:48 IST
Last Updated 12 ಮಾರ್ಚ್ 2021, 12:48 IST
ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ
ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ   

ನವದೆಹಲಿ: ಭಾರತವು ಇಂದು ಆರ್‌ಎಸ್‌ಎಸ್ ನೇತೃತ್ವದ ನಿರಂಕುಶಾಧಿಕಾರಿ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟಿದೆ ಎಂದು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಐತಿಹಾಸಿಕ 'ದಂಡಿ ಯಾತ್ರೆ' ವಾರ್ಷಿಕೋತ್ಸವದ ಅಂಗವಾಗಿ ಫೇಸ್‌ಬುಕ್ ಪುಟದಲ್ಲಿ ಬರೆದಿರುವ ರಾಹುಲ್ ಗಾಂಧಿ, ಗಾಂಧೀಜಿ ಮಾದರಿಯ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯಕ್ಕಾಗಿನ ಯಾತ್ರೆಯನ್ನುಮುಂದುವರಿಸೋಣ ಎಂದು ಕರೆ ನೀಡಿದರು.

1930ನೇ ಇಸವಿಯ ಮಾರ್ಚ್ 12ರಂದು ಮಹಾತ್ಮ ಗಾಂಧಿ ಅವರು ಬ್ರಿಟಿಷ್ ಆಡಳಿತ ಹೇರಿದ ಉಪ್ಪಿನ ಮೇಲಿನ ತೆರಿಗೆ ಕಾನೂನನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಾಬರಮತಿ ಆಶ್ರಮದಿಂದ ಗುಜರಾತ್‌ನ ದಂಡಿಗೆ ಕಾಲ್ನಡಿಗೆ ಯಾತ್ರೆ ನಡೆಸಿದ್ದರು. ಈ ಮೂಲಕ ಬ್ರಿಟಿಷ್ ಆಡಳಿತ ವಿರುದ್ಧ ಬೃಹತ್ ನಾಗರಿಕ ಅಸಹಕಾರ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಮಹಾತ್ಮ ಗಾಂಧೀಜಿ ಮುಂದಾಳತ್ವದಲ್ಲಿ ನಡೆದ ದಂಡಿ ಯಾತ್ರೆಯು ಇಡೀ ಜಗತ್ತಿಗೆ ಸ್ವಾತಂತ್ರ್ಯದ ಮಹತ್ತರವಾದ ಸಂದೇಶವನ್ನು ಸಾರಿದೆ ಎಂದು ರಾಹುಲ್ ಗಾಂಧಿ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ.

'ಸಮಗ್ರ ಸ್ವಾತಂತ್ರ್ಯಕ್ಕಾಗಿ ನಾವು ನಮ್ಮ ವೈಯಕ್ತಿಕ ಬದ್ಧತೆಯನ್ನು ನವೀಕರಿಸಬೇಕು. ಗಾಂಧೀಜಿ ಮಾದರಿಯ ಮಾರ್ಗದರ್ಶನದಿಂದ ಸ್ವಾತಂತ್ರ್ಯಕ್ಕಾಗಿನಯಾತ್ರೆಯನ್ನು ಮುಂದುವರಿಸೋಣ. ಜೈ ಹಿಂದ್..!' ಎಂದು ಉಲ್ಲೇಖಿಸಿದರು.

ಮಗದೊಂದು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ, ಬಾಪು ಅವರ ದಂಡಿ ಯಾತ್ರೆ ಪರಂಪರೆಯನ್ನು ದೇಶದ ಅನ್ನದಾತ ರೈತರು ನಿಭಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರೈತ ವಿರೋಧಿ ಮೋದಿ ಸರ್ಕಾರವು, ಬ್ರಿಟಿಷ್ ಆಡಳಿತದಂತೆ ಸತ್ಯಾಗ್ರಹವನ್ನು ಹತ್ತಿಕ್ಕುವಲ್ಲಿ ನಿರತವಾಗಿದೆ. ರೈತರ ಚಳವಳಿ ವಿಜಯಶಾಲಿಯಾಗಲಿದೆ, ದುರಹಂಕಾರವಲ್ಲ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.