ಶೇಖರ್ ಕುಮಾರ್ ಯಾದವ್
Credit: X/@barandbench
ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂದು ದೂರಿರುವ ‘ಇಂಡಿಯಾ’ ಗುಂಪಿನ ಪಕ್ಷಗಳ ರಾಜ್ಯಸಭಾ ಸದಸ್ಯರು, ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಹಾಗೂ ಅವರ ಪದಚ್ಯುತಿಗಾಗಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಸದಸ್ಯರು ವಾಗ್ದಂಡನೆ, ಪದಚ್ಯುತಿ ಗೊತ್ತುವಳಿಯ ನೋಟಿಸ್ ಸಿದ್ಧಪಡಿಸಿದ್ದು, ಇದಕ್ಕೆ ಅವರು ಸಹಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಗೊತ್ತುವಳಿಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಅವಕಾಶ ಸಿಗಬೇಕು ಎಂದಾದರೆ ಕನಿಷ್ಠ 50 ಸದಸ್ಯರ ಸಹಿ ಅಗತ್ಯ. ಗೊತ್ತುವಳಿ ನೋಟಿಸ್‌ಗೆ 40ಕ್ಕೂ ಹೆಚ್ಚು ಸದಸ್ಯರು ಈಗಾಗಲೇ ಸಹಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯಸಭೆಯ ಹಿರಿಯ ಸದಸ್ಯರಾದ ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್, ಜೈರಾಮ್ ರಮೇಶ್, ವಿವೇಕ್ ತಂಖಾ, ರೇಣುಕಾ ಚೌಧರಿ (ಇವರೆಲ್ಲ ಕಾಂಗ್ರೆಸ್ಸಿನವರು) ಸಂತೋಷ್ ಕುಮಾರ್ ಮತ್ತು ಪಿ.ಪಿ. ಸುನೀರ್ (ಸಿಪಿಐ), ಸಾಕೇತ್ ಗೋಖಲೆ ಮತ್ತು ಸಾಗರಿಕಾ ಘೋಷ್ (ಟಿಎಂಸಿ), ಜೋಸ್ ಕೆ. ಮಾಣಿ (ಕೇರಳ ಕಾಂಗ್ರೆಸ್ –ಎಂ) ಹಾಗೂ ಇತರ ಕೆಲವು ಸದಸ್ಯರು ನೋಟಿಸ್‌ಗೆ ಸಹಿ ಮಾಡಿದ್ದಾರೆ.
ನ್ಯಾಯಮೂರ್ತಿ ಯಾದವ್ ಅವರು ವಿಎಚ್‌ಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಡಿದ ಮಾತುಗಳನ್ನು ನೋಟಿಸ್‌ನಲ್ಲಿ ವಿಸ್ತೃತವಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ. ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆ – 1968 ಹಾಗೂ ಸಂವಿಧಾನದ 124(4)ನೆಯ ವಿಧಿಯ ಅಡಿಯಲ್ಲಿ ನೋಟಿಸ್ ಸಿದ್ಧಪಡಿಸಲಾಗಿದೆ.
ನ್ಯಾಯಮೂರ್ತಿ ಯಾದವ್ ವಿರುದ್ಧ ನಿರ್ದಿಷ್ಟವಾಗಿ ಮೂರು ಆರೋಪಗಳನ್ನು ಗುರುತಿಸಲಾಗಿದೆ. ದ್ವೇಷ ಭಾಷಣ ಮಾಡಿರುವುದು, ಕೋಮು ಸೌಹಾರ್ದವನ್ನು ಕದಡಲು ಯತ್ನಿಸಿರುವುದು ಅವರ ಮೇಲಿನ ಮೊದಲ ಆರೋಪ. ಅಲ್ಪಸಂಖ್ಯಾತರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡುವ ಮೂಲಕ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಎರಡನೆಯ ಆರೋಪ. ರಾಜಕೀಯ ವಿಚಾರಗಳ ಬಗ್ಗೆ ಅವರು ನಿರ್ದಿಷ್ಟ ನಿಲುವೊಂದನ್ನು ಬೆಂಬಲಿಸಿದ್ದಾರೆ ಎಂಬುದು ಮೂರನೆಯ ಆರೋಪ.
‘ದೇಶವು ಬಹಳ ಬೇಗ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಲಿದೆ. ಆ ದಿನ ದೂರವಿಲ್ಲ. ಭಾರತವು ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಇರಬೇಕು. ಇದು ಕಾನೂನು’ ಎಂದು ನ್ಯಾಯಮೂರ್ತಿ ಯಾದವ್ ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.