ADVERTISEMENT

ಮದ್ರಾಸ್‌ HC ನ್ಯಾ. ಸ್ವಾಮಿನಾಥನ್‌ ಪದಚ್ಯುತಿಗೆ ಇಂಡಿಯಾ ಬಣದ ಪಣ: ಏನಿದು ವಿವಾದ?

ಪಿಟಿಐ
Published 9 ಡಿಸೆಂಬರ್ 2025, 11:06 IST
Last Updated 9 ಡಿಸೆಂಬರ್ 2025, 11:06 IST
   

ನವದೆಹಲಿ: ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್‌ ಅವರ ವಾಗ್ದಂಡನೆಗೆ ಸಂಬಂಧಿಸಿದ ನಿಲುವಳಿ ಮಂಡನೆಗೆ ಕೋರಿ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ಸ್ಪೀಕರ್‌ಗೆ ನೋಟಿಸ್‌ ನೀಡಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ಉಪನಾಯಕ ಗೌರವ್‌ ಗೊಗೊಯ್‌, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ, ಡಿಎಂಕೆಯ ಕನಿಮೋಳಿ ಮತ್ತು ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ನೋಟಿಸ್ ಸಲ್ಲಿಸಿದ್ದಾರೆ.

ಸ್ವಾಮಿನಾಥನ್‌ ಅವರನ್ನು ಪದಚ್ಯುತಗೊಳಿಸುವ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯ ಇಂಡಿಯಾ ಬಣದ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಬರೆದ ಪತ್ರಗಳ ಪ್ರತಿಗಳನ್ನು ಬಿರ್ಲಾ ಅವರಿಗೆ ನೀಡಿದ್ದಾರೆ.

ADVERTISEMENT

‘ಇಂಡಿಯಾ’ ಬಣದ 100ಕ್ಕೂ ಹೆಚ್ಚು ಲೋಕಸಭಾ ಸಂಸದರು ಸಹಿ ಮಾಡಿರುವ ನೋಟಿಸ್‌ನಲ್ಲಿ ನ್ಯಾ. ಸ್ವಾಮಿನಾಥನ್ ಅವರ ನಡವಳಿಕೆಯು ನ್ಯಾಯಾಂಗದ ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ಜಾತ್ಯತೀತ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಉಲ್ಲೇಖಿಸಲಾಗಿದೆ.

ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಕುರಿತಂತೆ ಕಳೆದೊಂದು ವರ್ಷದಲ್ಲಿ ಸಲ್ಲಿಸಲಾದ ಮೂರನೇ ನೋಟಿಸ್ ಇದಾಗಿದೆ. ನ್ಯಾಯಮೂರ್ತಿ ಶೇಖರ್ ಯಾದವ್ ವಿರುದ್ಧದ ನೋಟಿಸ್‌ನ ನಿರ್ಧಾರ ಬಾಕಿ ಉಳಿದಿದ್ದರೂ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮೇಲಿನ ನೋಟಿಸ್ ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಮಧುರೈ ಬಳಿಯ ತಿರುಪರನ್‌ಕುಂಡ್ರಂ ಬೆಟ್ಟದ ಕಲ್ಲಿನ ದೀಪಸ್ತಂಭ ‘ದೀಪಥೋನ್‌’ನಲ್ಲಿ ಕಾರ್ತಿಕ ದೀಪ ಬೆಳಗಿಸಲು ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್‌.ಸ್ವಾಮಿನಾಥನ್‌ ಅವರು ಭಕ್ತರಿಗೆ ಅವಕಾಶ ನೀಡಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಅದೇ ಬೆಟ್ಟದಲ್ಲಿ ಸಿಕಂದರ್‌ ಬಾದುಶಾ ದರ್ಗಾ ಇದ್ದು, ಈ ಆದೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.