ADVERTISEMENT

ಹಾರ್ಕಿವ್‌ನಲ್ಲಿ ರಷ್ಯಾ ದಾಳಿ; ಹಾವೇರಿ ವಿದ್ಯಾರ್ಥಿ ಸಾವಿಗೆ ಗಣ್ಯರ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2022, 13:19 IST
Last Updated 1 ಮಾರ್ಚ್ 2022, 13:19 IST
ಮೃತ ವಿದ್ಯಾರ್ಥಿ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯ ಜಿ. ನವೀನ್ ಶೇಖರಪ್ಪ
ಮೃತ ವಿದ್ಯಾರ್ಥಿ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯ ಜಿ. ನವೀನ್ ಶೇಖರಪ್ಪ    

ಬೆಂಗಳೂರು: ಉಕ್ರೇನ್‌ನ ಹಾರ್ಕಿವ್‌ನಲ್ಲಿ ರಷ್ಯಾ ಪಡೆಗಳು ಮಂಗಳವಾರ ನಡೆಸಿರುವ ದಾಳಿಯಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ಸಾವಿಗೀಡಾಗಿದ್ದಾರೆ. ಮೃತ ವಿದ್ಯಾರ್ಥಿ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯ ಜಿ. ನವೀನ್ ಶೇಖರಪ್ಪ ಎಂದು ತಿಳಿದು ಬಂದಿದೆ.

ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ನವೀನ್‌ ಸಾವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸಂತಾಪ ಸೂಚಿಸಿ ಟ್ವೀಟಿಸಿದ್ದು, 'ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ಭಾರತ ಸರ್ಕಾರವು ಕಾರ್ಯತಂತ್ರ ಯೋಜನೆ ರೂಪಿಸುವುದು ಅಗತ್ಯವಾಗಿರುವುದನ್ನು ಮತ್ತೆ ಒತ್ತಿ ಹೇಳುತ್ತಿದ್ದೇನೆ. ಈಗ ಪ್ರತಿ ಕ್ಷಣವೂ ಅಮೂಲ್ಯವಾಗಿದೆ' ಎಂದಿದ್ದಾರೆ.

ADVERTISEMENT

ನವೀನ್‌ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇನೆ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ 'ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲ ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಅವರೆಲ್ಲರೂ ಆದಷ್ಟು ಬೇಗ ಮರಳಿ ಬರುವ ವಿಶ್ವಾಸವಿದೆ. ನಡೆಯುತ್ತಿರುವ ಸಂಘರ್ಷವೂ ಶೀಘ್ರದಲ್ಲೇ ಕೊನೆಯಾಗುವ ಭರವಸೆ ಇದೆ' ಎಂದು ಹಂಚಿಕೊಂಡಿದ್ದಾರೆ.

ಹಾರ್ಕಿವ್‌ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ನವೀನ್‌ ಇಂದು ಸಾವಿಗೀಡಾಗಿರುವುದನ್ನು ಹಂಚಿಕೊಂಡಿರುವ ನಟಿ ರಮ್ಯಾ, 'ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಕ್ರಿಯೆಯನ್ನು ಭಾರತ ಸರ್ಕಾರವು ಚುರುಕುಗೊಳಿಸುವ ಭರವಸೆ ಇದೆ. ನವೀನ್‌ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ...' ಎಂದು ಸಂತಾಪ ಸೂಚಿಸಿದ್ದಾರೆ.

ಬೆಳಿಗ್ಗೆ ದಿನಸಿ ತರಲು ಹೋಗಿದ್ದ ಸಂದರ್ಭದಲ್ಲಿ ರಷ್ಯಾ ಪಡೆಗಳಿಂದ ದಾಳಿ ನಡೆದಿದ್ದು, ನವೀನ್‌ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.