ಪ್ರಧಾನಿ ಮೋದಿ ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ಮಾತನಾಡಿದರು. ‘ಎಸ್ -400 ವಾಯು ರಕ್ಷಣಾ ವ್ಯವಸ್ಥೆ’ಯನ್ನು ಚಿತ್ರದಲ್ಲಿ ಕಾಣಬಹುದು
–ಪಿಟಿಐ ಚಿತ್ರ
ಪಾಕ್‌ಗೆ ಮತ್ತೆ ಮೋದಿ ಎಚ್ಚರಿಕೆ | ಭಾರತದ ವಾಯುನೆಲೆಗೆ ಹಾನಿಯಾಗಿದೆ ಎಂದು ಪ್ರಚಾರ ಮಾಡಿದ್ದ ಪಾಕ್ ಸೇನೆ
ನವದೆಹಲಿ: ‘ಭಾರತ–ಪಾಕಿಸ್ತಾನ ನಡುವಣ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದು, ಉಭಯ ದೇಶಗಳ ನಡುವೆ ಅಣ್ವಸ್ತ್ರ ಸಂಘರ್ಷದ ಸಾಧ್ಯತೆ ತಪ್ಪಿಸಲಾಗಿದೆ’ ಎಂಬ ಅಮೆರಿಕದ ಪ್ರತಿಪಾದನೆಯನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.
‘ಕಾಶ್ಮೀರವು ಭಾರತ–ಪಾಕ್ ನಡುವಣ ವಿವಾದ’ ಎಂಬ ನಿಲುವನ್ನು ಭಾರತ ಪುನರುಚ್ಚರಿಸಿದೆ. ಈ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾವವನ್ನು ನಿರಾಕರಿಸಿದೆ.
‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ– ಪಾಕಿಸ್ತಾನವೇ ದ್ವೀಪಕ್ಷೀಯ ಚರ್ಚೆ ನಡೆಸಬೇಕು ಎಂಬುದು ಭಾರತದ ದೀರ್ಘ ಕಾಲದ ನಿಲುವು. ಇದರಲ್ಲಿ ಬದಲಾವಣೆ ಇಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
‘ಭಾರತದ ಸೇನಾ ದಾಳಿಗೆ ಪ್ರತಿಯಾಗಿ ಅಣ್ವಸ್ತ್ರ ಬಳಸುವ ಆಯ್ಕೆಯನ್ನು ನಾವು ಎಂದಿಗೂ ಪರಿಗಣಿಸಿರಲಿಲ್ಲ’ ಎಂಬ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರ ಅಧಿಕೃತ ಹೇಳಿಕೆಯನ್ನೂ ಅವರು ಉಲ್ಲೇಖಿಸಿದರು,
ಪಾಕ್‌ಗೆ ಮತ್ತೆ ಮೋದಿ ಎಚ್ಚರಿಕೆ
ನವದೆಹಲಿ: ತಾನು ನಡೆಸಿರುವ ದಾಳಿ ಯಿಂದಾಗಿ ಆದಂಪುರ ವಾಯುನೆಲೆಗೆ ಹಾನಿಯಾಗಿದೆ ಎಂದು ಪಾಕಿಸ್ತಾನ ‘ಸುಳ್ಳು’ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಪ್ರಮುಖ ವಾಯುನೆಲೆಗೆ ಮಂಗಳವಾರ ಭೇಟಿ ನೀಡಿ ನೆರೆ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು. ‘ಶತ್ರುಗಳು ದಾಳಿ ನಡೆಸಿದರೆ ಅವರನ್ನು ದೂಳೀಪಟ ಮಾಡಲು ಭಾರತ ಯಾವಾಗಲೂ ಸಿದ್ಧವಿದೆ’ ಎಂದು ಮೋದಿ ಪ್ರತಿಪಾದಿಸಿದರು.
‘ಸಿಂಧೂರ’ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನವು ಇದೇ 7ರಿಂದ 10ರವರೆಗೆ ನಡೆಸಿದ್ದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳಿಂದ ಸೇನಾ ನೆಲೆಗಳು ಹಾಗೂ ವಾಯುಪಡೆ ನೆಲೆಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ನಿಂತಿದ್ದ ಸಶಸ್ತ್ರ ಪಡೆ ಸಿಬ್ಬಂದಿಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ಭಾಷಣ ಮಾಡಿರುವ ಚಿತ್ರಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಚಿತ್ರದ ಹಿನ್ನೆಲೆಯಲ್ಲಿ ‘ಎಸ್ -400 ವಾಯು ರಕ್ಷಣಾ ವ್ಯವಸ್ಥೆ’ ಇದೆ. ಈ ಮೂಲಕ, ವಾಯುನೆಲೆ ಮತ್ತು ರಷ್ಯಾ ಮೂಲದ ವಾಯು ರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸಲಾಗಿದೆ ಎಂಬ ಪಾಕಿಸ್ತಾನದ ಸುಳ್ಳು ಹೇಳಿಕೆಗಳನ್ನು ನಿರಾಕರಿಸುವ ಪ್ರಯತ್ನವನ್ನು ಭಾರತ ಮಾಡಿದೆ.
‘ಆಪರೇಷನ್ ಸಿಂಧೂರ’ ನಂತರ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ, ಒಂಬತ್ತು ಭಯೋತ್ಪಾದಕ ತಾಣಗಳ ನಾಶ ಮತ್ತು ಪಾಕಿಸ್ತಾನದ ಎಂಟು ಸೇನಾ ನೆಲೆಗಳಿಗೆ ಹಾನಿಯನ್ನುಂಟುಮಾಡಿದ ಸೇನೆಯನ್ನು ಮೋದಿ ಶ್ಲಾಘಿಸಿದರು. ‘ನಿಮ್ಮ ಸಾಧನೆ ಅಭೂತಪೂರ್ವ, ಊಹಿಸಲಾಗದ್ದು ಹಾಗೂ ಅದ್ಭುತ’ ಎಂದು ಅವರು ಬಣ್ಣಿಸಿದರು.
ಮಿಗ್ 29 ಯುದ್ಧ ವಿಮಾನಗಳನ್ನು ಹೊಂದಿರುವ ಆದಂಪುರ ನೆಲೆಯು ದೇಶದ ಎರಡನೇ ಅತಿದೊಡ್ಡ ವಾಯುನೆಲೆಯಾಗಿದೆ ಹಾಗೂ ಪಾಕಿಸ್ತಾನ ಗಡಿಯಿಂದ 100 ಕಿ.ಮೀ. ದೂರದಲ್ಲಿದೆ.
‘ಭಯೋತ್ಪಾದನೆಯ ವಿರುದ್ಧ ಭಾರತದ ‘ಲಕ್ಷ್ಮಣ ರೇಖೆ’ ಈಗ ಸ್ಪಷ್ಟವಾಗಿದೆ. ಈಗ ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ, ಭಾರತವು ತಕ್ಕ ಪ್ರತ್ಯುತ್ತರ ನೀಡುತ್ತದೆ. ಭಾರತ ಯಾವುದೇ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ. ಭಯೋತ್ಪಾದನೆ ಬೆಂಬಲಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಸಂಚುಕೋರರನ್ನು ನಾವು ಪ್ರತ್ಯೇಕ ಪ್ರತ್ಯೇಕವಾಗಿ ನೋಡುವುದಿಲ್ಲ’ ಎಂದು ಅವರು
ಪುನರುಚ್ಚರಿಸಿದರು.
‘ಪಾಕಿಸ್ತಾನದ ಮನವಿಯ ನಂತರ, ಭಾರತ ತನ್ನ ಸೇನಾ ಕಾರ್ಯಾಚರಣೆ ನಿಲ್ಲಿಸಿದೆ. ಪಾಕಿಸ್ತಾನ ಮತ್ತೆ ಭಯೋತ್ಪಾದಕ ಚಟುವಟಿಕೆಗಳನ್ನು ಅಥವಾ ಸೇನಾ ಕಾರ್ಯಾಚರಣೆ ನಡೆಸುವ ದುಸ್ಸಾಹಸ ತೋರಿಸಿದರೆ, ನಾವು ಸೂಕ್ತ ಉತ್ತರ ನೀಡುತ್ತೇವೆ. ನಾವು ನಮ್ಮದೇ ಆದ ರೀತಿಯಲ್ಲಿ ಈ ಉತ್ತರ ನೀಡುತ್ತೇವೆ’ ಎಂದು ಅವರು ಎಚ್ಚರಿಸಿದರು.
‘ಈ ಕಾರ್ಯಾಚರಣೆಯ ಮೂಲಕ ಭಾರತ್ ಮಾತಾ ಕಿ ಜೈ ಘೋಷಣೆಯ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಇದು ಕೇವಲ ಘೋಷಣೆ ಅಲ್ಲ. ಬದಲಾಗಿ, ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವುದಕ್ಕಾಗಿ ಮಾಡಿರುವ ಪ್ರತಿಜ್ಞೆ. ನಿಮ್ಮ ಶೌರ್ಯದ ಕಥೆಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ’ ಎಂದು ಅವರು ಹೇಳಿದರು.
‘ಶತ್ರುಗಳು ಈ ವಾಯುನೆಲೆ ಮತ್ತು ಇತರ ಹಲವಾರು ವಾಯುನೆಲೆಗಳ ಮೇಲೆ ದಾಳಿ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ, ಪಾಕಿಸ್ತಾನದ ದುಷ್ಟ ಯೋಜನೆಗಳು ಪ್ರತಿ ಬಾರಿಯೂ ವಿಫಲವಾದವು’ ಎಂದು ಅವರು ತಿಳಿಸಿದರು.
ಮುಗ್ಧ ಜನರ ರಕ್ತ ಚೆಲ್ಲಿದರೆ ವಿನಾಶ
ನೀವು ಭಯೋತ್ಪಾದನೆಯ ಎಲ್ಲ ದೊಡ್ಡ ನೆಲೆಗಳನ್ನು ನಾಶಪಡಿಸಿದ್ದೀರಿ. ಭಯೋತ್ಪಾದಕರ ಒಂಬತ್ತು ಅಡಗುತಾಣಗಳು ನಾಶವಾದವು. 100ಕ್ಕೂ ಹೆಚ್ಚು ಭಯೋತ್ಪಾದಕರು ಸತ್ತರು. ಭಾರತದಲ್ಲಿ ಮುಗ್ಧ ಜನರ ರಕ್ತ ಚೆಲ್ಲುವುದರಿಂದ ವಿನಾಶ ಮತ್ತು ಮಹಾ ವಿನಾಶ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.ನರೇಂದ್ರ ಮೋದಿ, ಪ್ರಧಾನಿ
ದಿನದ ಬೆಳವಣಿಗೆ
*ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಲಷ್ಕರ್-ಎ–ತಯಬಾ ಭಯೋತ್ಪಾದಕ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಿವೆ
*ಗಡಿ ಜಿಲ್ಲೆಗಳನ್ನು ಹೊರತುಪಡಿಸಿ ಜಮ್ಮು– ಕಾಶ್ಮೀರದ ಉಳಿದೆಡೆ ಶಾಲಾ– ಕಾಲೇಜುಗಳು
ಪುನರಾರಂಭಗೊಂಡವು
*ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರ ಕುರಿತು ಯಾವುದೇ ಮಾಹಿತಿ ನೀಡಿದರೆ ₹20 ಲಕ್ಷ ಬಹುಮಾನ ನೀಡುವುದಾಗಿ ಹೇಳಿರುವ ಪೋಸ್ಟರ್‌ಗಳನ್ನು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ವಿವಿಧೆಡೆ ಅಂಟಿಸಲಾಗಿದೆ
*ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಣ ವಿವಾದವಾಗಿದ್ದು, ಈ ಕುರಿತು ದ್ವಿಪಕ್ಷೀಯ ಚರ್ಚೆ ಮಾತ್ರ ಸಾಧ್ಯ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ: ಭಾರತ ಪುನರುಚ್ಚಾರ
*ಹರಿಯಾಣದಲ್ಲಿ ಮೇ 25ರ ವರೆಗೆ ಡ್ರೋನ್ ಬಳಕೆಗೆ ನಿರ್ಬಂಧ ಹೇರಲಾಗಿದೆ
*ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಅಧಿಕಾರಿಯೊಬ್ಬರು ತಮ್ಮ ಅಧಿಕೃತ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕೆ ಭಾರತ ಹೊರಹಾಕಿದೆ. ದೇಶ ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ
*‘ಆಪರೇಷನ್ ಸಿಂಧೂರ’ ಯಶಸ್ಸಿಗೆ ಸಶಸ್ತ್ರ ಪಡೆಗಳನ್ನು ಶ್ಲಾಘಿಸಲು ದೆಹಲಿಯ ಬಿಜೆಪಿ ನೇತೃತ್ವದ ಸರ್ಕಾರ, ಕರ್ತವ್ಯ ಪಥದಲ್ಲಿ ‘ಶೌರ್ಯ ಸಮ್ಮಾನ ಯಾತ್ರೆ’ ನಡೆಸಿತು
*ಭಾರತದ ಜತೆಗಿನ ಸೇನಾ ಸಂಘರ್ಷದಲ್ಲಿ ತನ್ನ 11 ಸೈನಿಕರು ಮತ್ತು 40 ನಾಗರಿಕರು
ಮೃತಪಟ್ಟಿರುವುದಾಗಿ ಪಾಕಿಸ್ತಾನ ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.