ADVERTISEMENT

India Pakistan Ceasefire | ಸಂಘರ್ಷ ಶಮನ: ಗಡಿ ಶಾಂತ

ಪಾಕಿಸ್ತಾನಕ್ಕೆ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳ ಜನರಲ್ಲಿ ಇನ್ನೂ ಶಮನವಾಗದ ಆತಂಕ

​ಪ್ರಜಾವಾಣಿ ವಾರ್ತೆ
ಪಿಟಿಐ
Published 12 ಮೇ 2025, 0:30 IST
Last Updated 12 ಮೇ 2025, 0:30 IST
<div class="paragraphs"><p>ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಮ್ಮು–ಕಾಶ್ಮೀರ ಸಹಜಸ್ಥಿತಿಗೆ ಮರಳಿದ್ದು ಶ್ರೀನಗರದ ಮಾರುಕಟ್ಟೆ ಮತ್ತೆ ಜನರಿಂದ ತುಂಬಿರುವುದು ಭಾನುವಾರ ಕಂಡುಬಂತು </p></div>

ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಮ್ಮು–ಕಾಶ್ಮೀರ ಸಹಜಸ್ಥಿತಿಗೆ ಮರಳಿದ್ದು ಶ್ರೀನಗರದ ಮಾರುಕಟ್ಟೆ ಮತ್ತೆ ಜನರಿಂದ ತುಂಬಿರುವುದು ಭಾನುವಾರ ಕಂಡುಬಂತು

   

 –ಪಿಟಿಐ ಚಿತ್ರ

ಶ್ರೀನಗರ/ಚಂಡೀಗಢ: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಜಮ್ಮು–ಕಾಶ್ಮೀರ, ಗುಜರಾತ್‌, ಪಂಜಾಬ್‌ನ ಪ್ರದೇಶಗಳಲ್ಲಿ ಭಾನುವಾರ ಶಾಂತಿ ಮನೆ ಮಾಡಿದೆ. ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗುಂಡಿನ ಮೊರೆತ, ಶೆಲ್‌ ದಾಳಿ ನಿಂತಿರುವುದು ಇದಕ್ಕೆ ಕಾರಣವಾದರೂ ಜನರಲ್ಲಿ ಇನ್ನೂ ಭಯ ಮನೆ ಮಾಡಿದೆ.

ADVERTISEMENT

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಶನಿವಾರ ಸಂಜೆ ಒಪ್ಪಿಗೆ ಸೂಚಿಸಿದವು. ಆದರೆ, ಪಾಕಿಸ್ತಾನ ಕಡೆಯಿಂದ ಶೆಲ್‌ ದಾಳಿಗೆ ಒಳಗಾಗಿರುವ ಪ್ರದೇಶಗಳ ಜನರು ಸರ್ಕಾರದ ಸೂಚನೆ ಮೇರೆಗೆ ತಮ್ಮ ಮನೆಗಳನ್ನು ತೊರೆದು, ಸುರಕ್ಷಿತ ಜಾಗಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಈ ಜನರಲ್ಲಿನ ಆತಂಕ ಇನ್ನೂ ದೂರವಾಗಿಲ್ಲ.

‘ಪಾಕಿಸ್ತಾನ ಮಾಡಿದ ದಾಳಿ ವೇಳೆ ವಿವಿಧ ಪ್ರದೇಶಗಳಲ್ಲಿ ಬಿದ್ದಿರುವ ಶೆಲ್‌ಗಳ ಪೈಕಿ ಕೆಲವು ಇನ್ನೂ ಸ್ಫೋಟವಾಗಿಲ್ಲ. ಜಮ್ಮು–ಕಾಶ್ಮೀರ ಪೊಲೀಸ್‌ ಇಲಾಖೆಯ ಬಾಂಬ್‌ ನಿಷ್ಕ್ರಿಯ ದಳ ಇಂತಹ ಶೆಲ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಬಾರಾಮುಲ್ಲಾ ಜಿಲ್ಲಾ ಪೊಲೀಸ್ ಹೊರಡಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. 

ಸ್ಫೋಟಗೊಳ್ಳದೇ ಇರುವ ಶೆಲ್‌ಗಳನ್ನು ನಿಷ್ಕ್ರಿಯಗೊಳಿಸುವವರೆಗೆ ಯಾರೂ ಮನೆಗಳಿಗೆ ಹಿಂದಿರುಗಬಾರದು ಎಂದೂ ಅಧಿಕಾರಿಗಳು ಸೂಚಿಸಿದ್ದಾರೆ.

ನಿಯಂತ್ರಣ ರೇಖೆ ಉದ್ದಕ್ಕೂ ಇರುವ ಗ್ರಾಮಗಳಾದ ಪೂಂಛ್, ರಾಜೌರಿ, ಉರಿ, ಟಂಗಧರ್‌ ನಿವಾಸಿಗಳು ಕಳೆದ ಕೆಲ ದಿನಗಳಿಂದ ಶೆಲ್‌ ದಾಳಿಯಿಂದ ಕಂಗೆಟ್ಟಿದ್ದರು. ಶನಿವಾರ ರಾತ್ರಿಯಿಂದ ಈ ಗ್ರಾಮಗಳು ಶಾಂತವಾಗಿವೆ.

‘ತಡರಾತ್ರಿಯಲ್ಲಿ ರಾಕೆಟ್‌ಗಳು ಮತ್ತು ಡ್ರೋನ್‌ಗಳ ದಾಳಿ ಕಂಡುಬಂದಿದೆ. ಇದು ಯಾವ ರೀತಿಯ ಸಂಘರ್ಷ ವಿರಾಮ’ ಎಂದು ಬಾರಾಮುಲ್ಲಾದ ನಿವೃತ್ತ ಶಿಕ್ಷಕರೊಬ್ಬರು ಪ್ರಶ್ನಿಸುತ್ತಾರೆ.

‘ತಾತ್ಕಾಲಿಕ ಕದನ ವಿರಾಮದಿಂದ ನಾವು ರೋಸಿ ಹೋಗಿದ್ದೇವೆ. ನಮಗೆ ಶಾಶ್ವತವಾದ ಕದನ ವಿರಾಮ ಬೇಕು’ ಎಂದೂ ಹೇಳಿದ್ದಾರೆ.

ಕಣಿವೆಯ ‍ಪಟ್ಟಣಗಳು ಹಾಗೂ ಶ್ರೀನಗರದ ಐತಿಹಾಸಿಕ ಮಾರುಕಟ್ಟೆಗಳಲ್ಲಿ ಜನರು ಖರೀದಿಗೆ ಮುಂದಾಗಿರುವುದು ಕಂಡುಬಂತು.

‘ಕಳೆದ ಒಂದು ವಾರದಿಂದ ವ್ಯಾಪಾರ ಇಲ್ಲದೇ ಸಂಕಷ್ಟ ಎದುರಿಸಿದ್ದೆವು. ಜನರು ಮನೆಯಿಂದ ಹೊರಗೆ ಬರುವುದಕ್ಕೂ ಹೆದರುತ್ತಿದ್ದರು. ಇಂದು (ಭಾನುವಾರ) ಜನರು ಮಾರುಕಟ್ಟೆಗೆ ದಾಂಗುಡಿ ಇಟ್ಟಿ
ದ್ದಾರೆ. ಇದು ಭಾನುವಾರದ ಶ್ರೀನಗರ ಮಾರುಕಟ್ಟೆ ಎಂಬ ಭಾವನೆ ಮೂಡುತ್ತಿದೆ’ ಎಂದು ಹಳೆ ಬಟ್ಟೆಗಳನ್ನು ಮಾರಾಟ ಮಾಡುವ ಫಯಾಜ್‌ ದಾರ್‌ ಹೇಳುತ್ತಾರೆ.

ಈ ಮಾತಿಗೆ ದನಿಗೂಡಿಸುವ ಮತ್ತೊಬ್ಬ ವರ್ತಕ ರಫೀಕ್‌ ಮೀರ್,‘ಕಳೆದ ಕೆಲ ದಿನಗಳಂದು ಬಾನಂಗಳದಲ್ಲಿ ಯುದ್ಧವಿಮಾನಗಳು ಅಬ್ಬರಿಸುತ್ತಾ ಹಾರಾಟ ನಡೆಸಿದ್ದರಿಂದ ಭಯಭೀತರಾಗಿದ್ದೆವು. ಯುದ್ಧ ಶುರುವಾಗಿಯೇ ಬಿಡುತ್ತದೆ ಎಂಬ ಭಾವನೆ ಮೂಡಿತ್ತು. ಇಂದು ನಾವು ನಿರಾಳರಾಗಿದ್ಧೇವೆ. ನನ್ನ ಮಕ್ಕಳೊಂದಿಗೆ ಅಂಗಡಿಗೆ ಬಂದು, ವ್ಯಾಪಾರ ಶುರು ಮಾಡಿದ್ದೇನೆ’ ಎಂದು ಹೇಳಿದರು.

ಪಂಜಾಬ್‌ನ ಅಮೃತಸರ, ಪಠಾಣ್‌ಕೋಟ್‌ ಹಾಗೂ ಫಿರೋಜ್‌ಪುರ ಸೇರಿದಂತೆ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಜನಜೀವನ ಸಹಜಸ್ಥಿತಿಗೆ ಬಂದಿದೆ. ಬೆಳಗಿನ ವಾಯುವಿಹಾರಕ್ಕೆ ಜನರು ತೆರಳುತ್ತಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

ಅಮೃತಸರ ಜಿಲ್ಲಾಡಳಿತ ಕೂಡ, ನಿತ್ಯದ ಕೆಲಸ–ಕಾರ್ಯಗಳಲ್ಲಿ ತೊಡಗುವಂತೆ ಜನರಿಗೆ ತಿಳಿಸಿದೆ. ಜಿಲ್ಲಾಧಿಕಾರಿ ಸಾಕ್ಷಿ ಸಾಹ್ನಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುರುಪ್ರೀತ್‌ ಸಿಂಗ್‌ ಭುಲ್ಲರ್ ಅವರು ನಗರದಾದ್ಯಂತ ಸಂಚರಿಸಿ, ಜನರಲ್ಲಿನ ಆತಂಕ ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

‘ಅಮೃತಸರದ ಜನರು ಧೈರ್ಯಶಾಲಿಗಳು. ಜಿಲ್ಲಾಡಳಿತದ ಮನವಿಗೆ ಧೃತಿಗೆಡದೇ ತಾಳ್ಮೆಯಿಂದ ಸ್ಪಂದಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ’ ಎಂದು ಸಾಕ್ಷಿ ಸಾಹ್ನಿ ಹೇಳಿದ್ದಾರೆ.

‘ಆತಂಕಪಡುವ ಅಗತ್ಯವಿಲ್ಲ. ಭದ್ರತಾ ಪಡೆಗಳು ನಿರಂತರವಾಗಿ ನಿಗಾ ವಹಿಸಿದ್ದು, ಜನರು ತಮ್ಮ ಉದ್ಯೋಗ, ದಿನನಿತ್ಯದ ಕಾರ್ಯಗಳಲ್ಲಿ ತೊಡಗಬಹುದು’ ಎಂದು ಜಲಂಧರ ಜಿಲ್ಲಾಧಿಕಾರಿ ಹಿಮಾಂಶು ಅಗರವಾಲ್‌ ಹೇಳಿರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ.

ಪಟಾಕಿಗಳನ್ನು ಸಿಡಿಸಬಾರದು ಹಾಗೂ ಡ್ರೋನ್‌ಗಳ ಹಾರಾಟ ನಡೆಸದಂತೆ ಜಿಲ್ಲಾಡಳಿತವು ಜನರಿಗೆ ಮನವಿ ಮಾಡಿದೆ. ಪಂಜಾಬ್‌, ಪಾಕಿಸ್ತಾನದೊಂದಿಗೆ 553 ಕಿ.ಮೀ. ಉದ್ದದಷ್ಟು ಗಡಿ ಹಂಚಿಕೊಂಡಿದೆ.

‘ಕಳೆದ ಕೆಲ ದಿನಗಳಿಂದ ಇಲ್ಲಿನ ಜನರಲ್ಲಿ ಆತಂಕ ಇತ್ತು. ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನ ನಡೆಸುವ ದುಸ್ಸಾಹಸಗಳಿಂದ ನಮ್ಮನ್ನು ರಕ್ಷಿಸುತ್ತವೆ ಎಂಬ ವಿಶ್ವಾಸ ಇತ್ತು’ ಎಂದು ಪಠಾಣ್‌ಕೋಟ್‌ ನಿವಾಸಿ ಸಿಮ್ರನ್‌ ಹೇಳುತ್ತಾರೆ.

ಮಕ್ಕಳು ಮತ್ತೆ ಉದ್ಯಾನದತ್ತ ಹೆಜ್ಜೆ ಹಾಕಿದ್ದು, ಆಟೋಟಗಳಲ್ಲಿ ಖುಷಿ ಕಾಣುತ್ತಿದ್ದಾರೆ. ರಸ್ತೆಗಳು ಮತ್ತೆ ಜನರು–ವಾಹನಗಳಿಂದ ತುಂಬಿವೆ. ಇಷ್ಟಾದರೂ ಜನರ ಮನದಲ್ಲಿ ಸುಪ್ತವಾಗಿ ಆತಂಕ ಇದ್ದೇ ಇದೆ. ಸಹಜಸ್ಥಿತಿ ಮರಳಿದ್ದರೂ ಸರ್ಕಾರದ ಆಶ್ವಾಸನೆ ಇದ್ದಾಗ್ಯೂ ಜನರು ಎಚ್ಚರಿಕೆಯಿಂದಲೇ ಇದ್ದಾರೆ.

ಅಮೆರಿಕ ಮಧ್ಯಸ್ಥಿಕೆಗೆ ಸರ್ಕಾರ ಒಪ್ಪಿದೆಯೇ?: ಕಾಂಗ್ರೆಸ್‌

ನವದೆಹಲಿ: ಕಾಶ್ಮೀರ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಗೆ ಭಾರತ ಒಪ್ಪಿದೆಯೇ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಭಾರತ ಮತ್ತು ಪಾಕಿಸ್ತಾನದ ಪರವಾಗಿ ಅಮೆರಿಕ ‘ಕದನ ವಿರಾಮ’ ಘೋಷಿಸಿರು ವುದನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್‌, ಈ ವಿಷಯವನ್ನು ಅಂತರರಾಷ್ಟ್ರೀಕರಣ ಗೊಳಿಸಲು ಯತ್ನಿಸಿದ್ದು ಸರಿಯಲ್ಲ ಎಂದೂ ವಾಗ್ದಾಳಿ ನಡೆಸಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್‌, ‘ಕದನ ವಿರಾಮ’ ಘೋಷಣೆಯು ಎಲ್ಲರನ್ನೂ ಚಕಿತಗೊಳಿಸಿದೆ. ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ಪರವಾಗಿ ಮೂರನೇ ದೇಶವೊಂದು ಈ ರೀತಿಯ ಘೋಷಣೆ ಮಾಡಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ತಟಸ್ಥ ಸ್ಥಳದಲ್ಲಿ ಮಾತುಕತೆ ನಡೆಯಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಹಾಗಾದರೆ, ಅಮೆರಿಕದ ಮಧ್ಯಸ್ಥಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆಯೇ? ಅದಕ್ಕೆ ಯಾವ ಪರಿಸ್ಥಿತಿ ಕಾರಣ ಎಂಬುದನ್ನು ಬಹಿರಂಗ ಪಡಿಸಬೇಕು. ಈ ವಿಷಯದಲ್ಲಿ ದೇಶ ಮತ್ತು ಸರ್ವ ಪಕ್ಷಗಳನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು‘ ಎಂದು ಒತ್ತಾಯಿಸಿದೆ.

ಕಾಶ್ಮೀರ ವಿಷಯ: ಮಧ್ಯಸ್ಥಿಕೆ ಒಪ್ಪಲ್ಲ: ಪ್ರಧಾನಿ ಮೋದಿ

ನವದೆಹಲಿ: ‘ಕಾಶ್ಮೀರದ ವಿಷಯದಲ್ಲಿ ಭಾರತ ಯಾರದ್ದೇ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಪಾಕಿಸ್ತಾನ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವ ಭಾಗವನ್ನು ಹಿಂದಕ್ಕೆ ಪಡೆಯುವ ಕುರಿತು ಮಾತ್ರ ಚರ್ಚೆ ನಡೆಯಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಭಾನುವಾರ ತಿಳಿಸಿವೆ.

ಭಾರತದ ವಿರುದ್ಧ ಪಾಕಿಸ್ತಾನ ಎಲ್ಲಿಯವರೆಗೆ ಭಯೋತ್ಪಾ ದನೆಯನ್ನು ಪ್ರಾಯೋಜಿಸುತ್ತಿರುತ್ತದೆಯೋ ಅಲ್ಲಿಯವರೆಗೂ, ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

‘ಆಪರೇಷನ್‌ ಸಿಂಧೂರ’ ಮುಕ್ತಾಯಗೊಂಡಿಲ್ಲ ಎಂದು ಹೇಳಿರುವ ಪ್ರಧಾನಿ ಅವರು, ‘ಪಾಕ್‌ ಕಡೆಯಿಂದ ಬರುವ ಗುಂಡುಗಳಿಗೆ ಪ್ರತಿಯಾಗಿ ಫಿರಂಗಿ ಮೂಲಕ ಉತ್ತರ ನೀಡಬೇಕು. ಪಾಕ್‌ನ ಪ್ರತಿಯೊಂದು ಕ್ರಿಯೆಗೂ ಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡಬೇಕು ಎಂದು ಸಶಸ್ತ್ರ ಪಡೆಗಳಿಗೆ ಸೂಚಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸಿಕೊಂಡು, ತನ್ನ ಆಯ್ಕೆಯ ಕ್ಷೇತ್ರದಲ್ಲಿ ಸಹಕಾರ ನಿರೀಕ್ಷಿಸಿದರೆ ಆಗುವುದಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.ಪಾಕಿಸ್ತಾನದ ಜತೆಗೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮೂಲಕ ಮಾತ್ರ ಮಾತುಕತೆ ನಡೆಯಲಿದೆ ಎಂದಿದ್ದಾರೆ.

ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಗೆ ಹೊಂದಿಕೊಂಡಿರುವ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ನಡೆಸಿದ ದಾಳಿಯಿಂದಾಗಿ ಬಿದ್ದಿರುವ ಶೆಲ್‌ಗಳಲ್ಲಿ ಹಲವು ಸ್ಫೋಟಗೊಂಡಿರದ ಕಾರಣ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ  

ಗುಜರಾತ್‌ ಗಡಿ ಜಿಲ್ಲೆಗಳು ಸಹಜ ಸ್ಥಿತಿಗೆ

ಅಹಮದಾಬಾದ್: ಭಾರತ–ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಗುಜರಾತ್‌ನ ಕಛ್, ಬನಾಸ್‌ಕಾಂಠ ಹಾಗೂ ಪಠಾಣ್‌ ಜಿಲ್ಲೆಗಳಲ್ಲಿ ಸಹಜಸ್ಥಿತಿ ಮರಳಿದೆ.

ಯಾವುದೇ ಡ್ರೋನ್‌ಗಳ ಅನುಮಾನಾಸ್ಪದ ಹಾರಾಟ ವರದಿಯಾಗದ ಹಿನ್ನೆಲೆಯಲ್ಲಿ ವಾರಾಂತ್ಯದ ಚಟುವಟಿಕೆಗಳಲ್ಲಿ ಜನರು ಎಂದಿನಂತೆ ಭಾಗಿಯಾಗಲು ಸಾಧ್ಯವಾಗಿದೆ. 

ಕಳೆದ ಒಂದು ವಾರದಲ್ಲಿ ಗುಜರಾತ್‌ನ ವಿವಿಧ ಭಾಗಗಳನ್ನು ಗುರಿಯಾಗಿಸಿ ಡ್ರೋನ್‌ಗಳ ಮೂಲಕ ದಾಳಿಗೆ ಪಾಕಿಸ್ತಾನ ಯತ್ನಿಸಿತ್ತು. ಆದರೆ, ರಕ್ಷಣಾ ಪಡೆಗಳು ಈ ಯತ್ನವನ್ನು ವಿಫಲಗೊಳಿಸಿದ್ದವು.
ಅಲ್ಲದೇ, ಈ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬ್ಲ್ಯಾಕ್‌ಔಟ್‌ (ದೀಪಗಳನ್ನು ಆರಿಸುವುದು) ಘೋಷಿಸಲಾಗಿತ್ತು. 

ಇದೀಗ ಪರಿಸ್ಥಿತಿ ತಿಳಿಗೊಂಡಿರುವ ಕಾರಣ ಪಟ್ಟಣಗಳು ಸಹಜಸ್ಥಿತಿಗೆ ಮರಳಿವೆ. ಆದಾಗ್ಯೂ, ಯಾವುದೇ ಅಹಿತಕರ ಘಟನೆಗಳ ಸದಾ ಎಚ್ಚರಿಕೆ ವಹಿಸುವಂತೆಯೂ ಅಧಿಕಾರಿಗಳು ಜನರಿಗೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ. 

ಮಾರುಕಟ್ಟೆಗಳಲ್ಲಿ ಜನರು ಮತ್ತೆ ನೆರೆದಿದ್ದಾರೆ. ಕರಾವಳಿ ಪಟ್ಟಣಗಳಾದ ಜಾಮ್‌ನಗರ, ದೇವಭೂಮಿ ದ್ವಾರಕೆಯಲ್ಲಿ ಎಂದಿನಂತೆ ವಾಣಿಜ್ಯ ಚಟುವಟಿಕೆಗಳು ಪುನಾರಂಭಗೊಂಡಿವೆ.

ಪ್ರಮುಖ ಅಂಶಗಳು

* ಜಿಲ್ಲಾಡಳಿತ ನಿರ್ದೇಶನ ನೀಡದ ಹೊರತು ಯಾರೂ ತಮ್ಮ ಗ್ರಾಮಗಳಿಗೆ ಮರಳಬಾರದು ಎಂದು ಸೂಚಿಸಲಾಗಿದೆ

* ನಿಯಂತ್ರಣ ರೇಖೆ ಉದ್ದಕ್ಕೂ ಬಿದ್ದಿರುವ ಸ್ಫೋಟಗೊಳ್ಳದ ಶೆಲ್‌ಗಳಿಂದ ಅಪಾಯ ಹೆಚ್ಚು

* ಸಂಭಾವ್ಯ ಅಪಾಯ ತಪ್ಪಿಸಲು ಪೊಲೀಸ್‌ ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳಿಂದ ಸಮನ್ವಯದ ಕಾರ್ಯಾಚರಣೆ

* ಜಮ್ಮು–ಕಾಶ್ಮೀರದಲ್ಲಿ ಮಂಗಳವಾರ ವರೆಗೆ ಶಾಲೆಗಳಿಗೆ ರಜೆ ಘೋಷಣೆ

* ಭಾರತ–ಪಾಕಿಸ್ತಾನದ ನಡುವೆ ಸಂಘರ್ಷ ವಿರಾಮ ಘೋಷಣೆಯಾದ ಬಳಿಕ ಗುಜರಾತ್‌ನ ಕಛ್, ಬನಾಸ್‌ಕಾಂಠ ಹಾಗೂ ಪಠಾಣ್‌ ಜಿಲ್ಲೆಗಳಲ್ಲಿ ಸಹಜಸ್ಥಿತಿ ಮರಳಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.