ನವದೆಹಲಿ: ‘ಪಾಕಿಸ್ತಾನ ಜೊತೆಗಿನ ಬಿಗುವಿನ ಸ್ಥಿತಿ ಉಲ್ಬಣಗೊಳಿಸುವ ಇರಾದೆ ಭಾರತಕ್ಕಿಲ್ಲ. ಆದರೆ, ಸೇನಾ ದಾಳಿ ನಡೆದರೆ ಅದಕ್ಕೆ ದೃಢವಾಗಿ ಪ್ರತ್ಯುತ್ತರ ನೀಡಲಾಗುವುದು’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರ ಜೊತೆಗೆ ಇಲ್ಲಿ ನಡೆದ ಸಭೆಯಲ್ಲಿ ಜೈಶಂಕರ್ ಅವರು ಭಾರತದ ಈ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
‘ಗಡಿಯಾಚೆ ಇರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ನಿಖರ, ಸ್ಪಷ್ಟ ದಾಳಿ ನಡೆಸಲು, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕೃತ್ಯವೇ ಕಾರಣ’ ಎಂದು ಸ್ಪಷ್ಟಪಡಿಸಿದರು.
‘ಈಗ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಉದ್ದೇಶವಿಲ್ಲ. ಆದರೆ, ಸೇನಾ ದಾಳಿ ಸ್ಪಷ್ಟ ಮತ್ತು ದೃಢವಾದ ಪ್ರತಿಕ್ರಿಯೆ ಸಿಗಲಿದೆ ಎಂಬುದರಲ್ಲಿ ಯಾವುದೇ ಶಂಕೆ ಬೇಡ’ ಎಂದು ಹೇಳಿದರು.
ನೆರೆಯ ಮತ್ತು ಭಾರತದ ಆಪ್ತ ಪಾಲುದಾರ ದೇಶವಾಗಿ ಇರಾನ್, ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ಅರಿವು ಹೊಂದಿರುವುದು ಮುಖ್ಯ ಎಂದೂ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.