ಭಾರತ–ಪಾಕಿಸ್ತಾನ
– ಗೆಟ್ಟಿ ಚಿತ್ರ
ಮುಂಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ನಿಗದಿತ ಪಂದ್ಯಕ್ಕೆ ಶಿವ ಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕೇಂದ್ರ ಕೀಡಾ ಸಚಿವ ಮನಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿದ್ದು, ಬಿಸಿಸಿಐ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಮಿಗಿಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
'ಬೇಸರದ ಸಂಗತಿಯೆಂದರೆ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡವನ್ನು ಬಿಸಿಸಿಐ ಕಳುಹಿಸುತ್ತದೆ. ಬಿಸಿಸಿಐ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಮಿಗಿಲಾಗಿದೆಯೇ? ನಮ್ಮ ಯೋಧರ ತ್ಯಾಗಕ್ಕಿಂತಲೂ ಮಿಗಿಲಾಗಿದೆಯೇ ? ಸಿಂಧೂರಕ್ಕಿಂತಲೂ ಮಿಗಿಲಾಗಿದೆಯೇ' ಎಂದು ಪ್ರಶ್ನಿಸಿದ್ದಾರೆ.
'ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನದ ಪಾತ್ರದ ಬಗ್ಗೆ ವಿವರಿಸಲು ನಾವು ಇಡೀ ಜಗತ್ತಿಗೆ ನಿಯೋಗಗಳನ್ನು ಕಳುಹಿಸಿದ್ದೇವೆ. ಈಗ ಪಾಕ್ ಜೊತೆ ಕ್ರಿಕೆಟ್ ಆಡುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಮತ್ತೆ ನಿಯೋಗಗಳನ್ನು ಕಳುಹಿಸಲಾಗುತ್ತದೆಯೇ' ಎಂದು ಕೇಳಿದ್ದಾರೆ.
'ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ಹಾಕಿ ಆಡುವುದರಿಂದ ಪಾಕಿಸ್ತಾನ ಹಿಂದೆ ಸರಿದಾಗ ಬಿಸಿಸಿಐ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪಾಕಿಸ್ತಾನ ವಿರುದ್ಧ ಆಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ' ಎಂದು ಅವರು ಆರೋಪಿಸಿದ್ದಾರೆ.
ಮಾನವೀಯ ಹಿತದೃಷ್ಟಿಯಿಂದ ಅನೇಕ ರಾಷ್ಟ್ರಗಳನ್ನು ಕ್ರೀಡೆಯಿಂದ ದೂರವಿರಿಸಲಾಗಿದೆ. ಭಯೋತ್ಪಾದನೆಯು ಶಾಂತಿಯುತ ಪ್ರಗತಿಗೆ ತಡೆಯೊಡ್ಡುತ್ತಿದೆ. ಕಳೆದ ದಶಕದಲ್ಲಿ ಪಾಕಿಸ್ತಾನ ಪ್ರಾಯೋಜಿತ ದಾಳಿಗಳು ದೇಶದ ನಾಗರಿಕರ ಮೇಲೆ ನಡೆಯುತ್ತಲೇ ಎಂದು ಹೇಳಿದ್ದಾರೆ.
ಕೆಂಪು ಕೋಟೆಯ ಭಾಷಣದಲ್ಲಿ ನೀರು ಹಾಗೂ ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಜಾಹೀರಾತು ಮೂಲಕ ಹಣ ಗಳಿಸುವ ಬಿಸಿಸಿಐ ಇರಾದೆಯಿಂದಾಗಿ ಆಪರೇಷನ್ ಸಿಂಧೂರ ಹಾಗೂ ಯೋಧರ ತ್ಯಾಗ ಅಪ್ರಧಾನವೆನಿಸಿದೆ ಎಂದಿದ್ದಾರೆ.
ಯುಎಇನಲ್ಲಿ ಆಯೋಜನೆಯಾಗಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಸೆಪ್ಟೆಂಬರ್ 14ರಂದು ದುಬೈಯಲ್ಲಿ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.