ಮುಂಬೈ: ದೇಶದ ಗಡಿಗಳಲ್ಲಿ ಭಾರತೀಯ ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡುತ್ತಿರುವ ವೇಳೆ, ಪಾಕಿಸ್ತಾನದೊಂದಿಗೆ ಭಾರತ ಕ್ರಿಕೆಟ್ ಪಂದ್ಯ ಆಡುವುದು ರಾಷ್ಟ್ರೀಯ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾನುವಾರ (ಸೆ.14) ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಬಳಿಕ ಇದೇ ಮೊದಲ ಬಾರಿ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಸೆಣಸಲಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ಭಾನುವಾರ ನಿಗದಿಯಾಗಿರುವ ಉಭಯ ದೇಶಗಳ ನಡುವಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸಬೇಕು. ಈ ಮೂಲಕ ಭಯೋತ್ಪಾದನೆಯ ಬಗ್ಗೆ ಭಾರತ ಹೊಂದಿರುವ ನಿಲುವನ್ನು ಜಗತ್ತಿಗೆ ತಿಳಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಠಾಕ್ರೆ, ಕ್ರಿಕೆಟ್ ಪಂದ್ಯವು ದೇಶಭಕ್ತಿ ಬಗೆಗಿನ ತಮಾಷೆಯಾಗಿದೆ ಎಂದು ಕಿಡಿಕಾರಿದ್ದಾರೆ
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಿದ ನಂತರ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಂದ್ಯವಾಡಲಿ ಎಂದು ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
‘ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಹಾಗೂ ಕ್ರಿಕೆಟ್ ಇರಬಾರದು ಎಂಬುದು ಭಾರತೀಯರ ಅಭಿಪ್ರಾಯವಾಗಿದೆ. ನಾವು ವಿಶ್ವ ಚಾಂಪಿಯನ್‌ಶಿಪ್ ಲೆಜೆಂಡ್ಸ್ ಟೂರ್ನಿಯಲ್ಲೂ ಕೂಡ ಪಾಕ್‌ನೊಂದಿಗೆ ಪಂದ್ಯ ಆಡಿರಲಿಲ್ಲ’ ಸಿಂಗ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.