ಪಾಕಿಸ್ತಾನ ಸೇನಾ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮನೆಯೊಂದಕ್ಕೆ ಹಾನಿಯಾಗಿರುವುದು
ರಾಯಿಟರ್ಸ್ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಪಾಕಿಸ್ತಾನ ಸೇನಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟು, ಅವರ ಕುಟುಂಬದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾಕ್ ಪಡೆಗಳ ಆಕ್ರಮಣಕಾರಿ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ (ಎಲ್‌ಒಸಿ) ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಪಡೆಗಳು, ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ಗುರುವಾರ ರಾತ್ರಿಯಿಡೀ ಶೆಲ್ ದಾಳಿ ನಡೆಸಿವೆ ಎಂದು ಹೇಳಿದ್ದಾರೆ.
ಉರಿ ವಲಯದಲ್ಲಿರುವ ಸಿಲಿಕೋಟ್, ಬೋನಿಯಾರ್, ಕಮಲ್‌ಕೋಟ್, ಮೊಹ್ರಾ ಮತ್ತು ಜಿಂಗಲ್ ಪ್ರದೇಶಗಳ ಮೇಲೆ ದಾಳಿ ನಡೆದಿದೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಇದರಿಂದಾಗಿ, ಜನರು ಮನೆಗಳಿಂದ ಪಲಾಯನ ಮಾಡಿದ್ದಾರೆ ಎಂದೂ ವಿವರಿಸಿದ್ದಾರೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಕಾರಿಗೆ ಶೆಲ್ ಅಪ್ಪಳಿಸಿದ್ದು, ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ, ನರ್ಗಿಸ್ ಬೇಗಂ ಎಂಬವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.