ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನತೆಯನ್ನು ಶಮನ ಮಾಡಲು ನೆರವಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಬುಧವಾರ ಮುಂಜಾನೆ 'ಆಪರೇಷನ್ ಸಿಂಧೂರ' ಸೇನಾ ಕಾರ್ಯಾಚರಣೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, 'ಸಹಾಯ ಮಾಡಲು ಸಾಧ್ಯವಾದರೆ, ನಾನು ಸಿದ್ಧವಿದ್ದೇನೆ' ಎಂದಿದ್ದಾರೆ.
'ಇದು ಅತ್ಯಂತ ಭಯಾನಕ ಪರಿಸ್ಥಿತಿ. ನನಗೆ ಇಬ್ಬರ (ಭಾರತ, ಪಾಕಿಸ್ತಾನ) ಬಗ್ಗೆಯೂ ಚೆನ್ನಾಗಿ ಗೊತ್ತಿದೆ. ಈ ಉದ್ವಿಗ್ನತೆ ನಿಲ್ಲಿಸುವುದನ್ನು ನೋಡ ಬಯಸುತ್ತೇನೆ. ಅವರು, ಒಬ್ಬರು ಅನುಭವಿಸಿದ್ದ ನೋವಿಗೆ ಮತ್ತೊಬ್ಬರು ಪ್ರತ್ಯುತ್ತರ ನೀಡಿದ್ದಾರೆ. ಹಾಗಾಗಿ, ಪರಸ್ಪರ ದಾಳಿಯನ್ನು ಇದೀಗ ನಿಲ್ಲಿಸಬಹುದು' ಎಂದು ಹೇಳಿದ್ದಾರೆ. ಹಾಗೆಯೇ, ಎರಡೂ ರಾಷ್ಟ್ರಗಳು – ಭಾರತ ಮತ್ತು ಪಾಕಿಸ್ತಾನ, ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿವೆ ಎಂದಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 25 ನಿಮಿಷ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆ ಉಗ್ರರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಜಾಗತಿಕ ಉಗ್ರ ಮಸೂದ್ ಅಜರ್‌ನ ಕುಟುಂಬದ 10 ಸದಸ್ಯರು ಹಾಗೂ ನಾಲ್ವರು ಆಪ್ತರು ಸೇರಿದಂತೆ 70ರಿಂದ 100 ಭಯೋತ್ಪಾದಕರು ಈ ವೇಳೆ ಹತ್ಯೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.