ನವದೆಹಲಿ: ಭಾರತ– ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಗುರುವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೇರಿದಂತೆ ದೇಶದ ಗಡಿ ಕಾವಲು ಪಡೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನವು ಗುರುವಾರ ಜಮ್ಮು ಸೇರಿದಂತೆ ಅನೇಕ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲು ಪ್ರಯತ್ನಿಸಿತ್ತು. ಆದರೆ ಭಾರತ ದಿಟ್ಟ ಉತ್ತರ ನೀಡುವ ಮೂಲಕ ಪಾಕಿಸ್ತಾನದ ಪ್ರಯತ್ನಗಳಿಗೆ ತಣ್ಣೀರು ಎರಚಿದೆ.
ಭಾರತ–ಪಾಕ್ ಗಡಿ ಪ್ರದೇಶಗಳಲ್ಲಿ ಜನರ ಸುರಕ್ಷತೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಶಾ ಚರ್ಚೆ ನಡೆಸಿದರು. ಪರಿಸ್ಥಿತಿಯನ್ನು ಅವಲೋಕಿಸಲು ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುಲು ಬಿಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ ಭದ್ರತಾ ಪಡೆಗಳ ಮುಖ್ಯಸ್ಥರಿಗೆ ಶಾ ಸೂಚಿಸಿದ್ದಾರೆ.
ಈ ವೇಳೆ ಗಡಿ ಭದ್ರತಾ ಪಡೆಗಳ ಮುಖ್ಯಸ್ಥರು ಗಡಿ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ಕ್ರಮ ಸೇರಿದಂತೆ ಪ್ರಮುಖ ವಿಚಾರಗಳನ್ನು ಅಮಿತ್ ಶಾ ಅವರ ಗಮನಕ್ಕೆ ತಂದರು ಎಂದು ಮೂಲಗಳು ಹೇಳಿವೆ.
ದೇಶದ ವಿಮಾನ ನಿಲ್ದಾಣಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಸಿಐಎಸ್‌ಎಫ್ ಮುಖ್ಯಸ್ಥರಿಂದ ಅಮಿತ್ ಶಾ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.
ಸಿಐಎಸ್‌ಎಫ್ ಭದ್ರತೆ ಪಡೆಗಳು ದೇಶದ ವಿಮಾನ ನಿಲ್ದಾಣ, ಮೆಟ್ರೊ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಒದಗಿಸುತ್ತದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಗುರುವಾರ ತಡರಾತ್ರಿಯೂ ಭಾರತ ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ಮತ್ತೊಮ್ಮೆ ತಿರುಗೇಟು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.