ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾವವನ್ನು ಭಾರತ ನಯವಾಗಿ ತಿರಸ್ಕರಿಸಿದೆ.
ಟ್ರಂಪ್ ಪ್ರಸ್ತಾವಕ್ಕೆ ಧನ್ಯವಾದ ತಿಳಿಸಿದ ಭಾರತ, ಸಾಧ್ಯವಾದರೆ ಭಯೋತ್ಪಾದಕ ಸಂಘಟನೆಗಳಿಗೆ ನೆರವಾಗುವುದನ್ನು ನಿಲ್ಲಿಸುವಂತೆ ಇಸ್ಲಾಮಾಬಾದ್‌ಗೆ ಹೇಳಿ ಎಂದಿದೆ. ಈ ಕುರಿತು ವಾಷಿಂಗ್ಟನ್‌ನಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾಟ್ರಾ ಅಮೆರಿಕಕ್ಕೆ ಪತ್ರ ಬರೆದಿದ್ದಾರೆ.
ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ 2020ರ ಜೂನ್ 15ರಂದು ಗ್ಯಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾದ ಸಂದರ್ಭದಲ್ಲೂ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತ್ತು.
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತಯಬಾ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ಮೇ 7ರಂದು ದಾಳಿ ನಡೆಸಿ ಅವುಗಳನ್ನು ಧ್ವಂಸ ಮಾಡಿತ್ತು.
ಆಪರೇಷನ್ ಸಿಂಧೂರದ ಮಾಹಿತಿ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ಟ್ರಂಪ್, ‘ಇದು ದೀರ್ಘಕ್ಕೆ ಹೋಗುವುದನ್ನು ತಡೆಯಬೇಕು. ಇದು ಗಂಭೀರ. ನಾನು ಎರಡೂ ದೇಶಗಳ ನಾಯಕರನ್ನು ಬಲ್ಲೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಉಭಯ ನಾಯಕರು ಪ್ರಯತ್ನಿಸುತ್ತಾರೆ ಎಂಬ ಭರವಸೆ ಇದೆ. ಕ್ರಿಯೆಗೆ ಪ್ರತಿಕ್ರಿಯೆ ನೀಡಿದ್ದಾಗಿದೆ. ಈಗ ಇದನ್ನು ನಿಲ್ಲಿಸಬೇಕು’ ಎಂದಿದ್ದರು.
ಅಮೆರಿಕ ಮಾತ್ರವಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸುವ ಯಾವುದೇ ರಾಷ್ಟ್ರದ ಪ್ರಸ್ತಾವವನ್ನು ಭಾರತ ತಿರಸ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.