ADVERTISEMENT

ಜಿನ್ನಾ, ಕಾಂಗ್ರೆಸ್, ಮೌಂಟ್‌ ಬ್ಯಾಟನ್‌ ದೇಶ ವಿಭಜನೆಯ ಅಪರಾಧಿಗಳು: NCERT ಪಠ್ಯ

ಪಿಟಿಐ
Published 16 ಆಗಸ್ಟ್ 2025, 12:50 IST
Last Updated 16 ಆಗಸ್ಟ್ 2025, 12:50 IST
   

ನವದೆಹಲಿ: ‘ಭಾರತ ವಿಭಜನೆಗೆ ಕಾಂಗ್ರೆಸ್‌, ಮಹಮ್ಮದ್‌ ಅಲಿ ಜಿನ್ನಾ ಮತ್ತು ವೈಸರಾಯ್‌ ಲಾರ್ಡ್‌ ಮೌಂಟ್‌ ಬ್ಯಾಟನ್ ಅವರೇ ಕಾರಣ’ ಎಂದು ಉಲ್ಲೇಖಿಸಿರುವ ‘ದೇಶ ವಿಭಜನೆಯ ಕರಾಳ ದಿನ’ ಎಂಬ ವಿಶೇಷ ಪಠ್ಯಕ್ರಮವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಪ್ರಕಟಿಸಿದೆ.

‘ಕೆಟ್ಟ ಆಲೋಚನೆಯಿಂದಾಗಿ ಭಾರತದ ವಿಭಜನೆಯಾಯಿತು. ಇಂಡಿಯನ್‌ ಮುಸ್ಲಿಂ ಪಕ್ಷ ಮತ್ತು ಮುಸ್ಲಿಂ ಲೀಗ್‌ ಲಾಹೋರ್‌ನಲ್ಲಿ 1940ರಲ್ಲಿ ಸಭೆ ಸೇರಿದ್ದವು. ಮುಸ್ಲಿಂ ಲೀಗ್‌ ನಾಯಕ ಮಹಮ್ಮದ್‌ ಅಲಿ ಜಿನ್ನಾ ಅವರು, ‘ಹಿಂದೂಗಳು ಮತ್ತು ಮುಸ್ಲಿಮರು ವಿಭಿನ್ನ ಧಾರ್ಮಿಕ ಸಿದ್ಧಾಂತಗಳು, ಸಾಮಾಜಿಕ ಪದ್ಧತಿಗಳನ್ನು ಹೊಂದಿದ್ದಾರೆ’ ಎಂದು ಹೇಳಿದ್ದರು’ ಎಂದು ಪಠ್ಯದಲ್ಲಿ ವಿವರಿಸಲಾಗಿದೆ.

‘ದೇಶ ವಿಭಜಿಸಿದವರು’ ಎಂಬ ಶೀರ್ಷಿಕೆಯ ವಿಭಾಗದಲ್ಲಿ, ‘ಅಂತಿಮವಾಗಿ 1947ರ ಆಗಸ್ಟ್‌ 15ರಂದು ಭಾರತ ಎರಡು ಹೋಳಾಯಿತು. ಇದು ಕೇವಲ ಒಬ್ಬರಿಂದ ಆಗಿದ್ದಲ್ಲ. ಭಾರತದ ವಿಭಜನೆಗೆ ಮೂವರು ಹೊಣೆಗಾರರು. ಜಿನ್ನಾ ಅವರು ವಿಭಜನೆಗೆ ಆಗ್ರಹಿಸಿದರು, ಕಾಂಗ್ರೆಸ್‌ ಇದಕ್ಕೆ ಒಪ್ಪಿಗೆ ನೀಡಿತು ಮತ್ತು ಮೌಂಟ್‌ ಬ್ಯಾಟನ್‌ ಅದನ್ನು ಅನುಷ್ಠಾನ ಮಾಡಿದರು. ಆದರೆ ಮೌಂಟ್ ಬ್ಯಾಟನ್‌ ದೊಡ್ಡ ಪ್ರಮಾದದ ತಪ್ಪಿತಸ್ಥ ಎಂದು ಸಾಬೀತಾಗಿದೆ’ ಎಂದು ಉಲ್ಲೇಖಿಸಿದೆ.

ADVERTISEMENT

ಅಧಿಕಾರ ಹಸ್ತಾಂತರಿಸಲು 1948ರ ಜೂನ್‌ನಲ್ಲಿ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಮೌಂಟ್‌ ಬ್ಯಾಟನ್‌ ಅದಕ್ಕೂ ಮುಂಚೆಯೇ ಅಂದರೆ 1947ರ ಆಗಸ್ಟ್‌ನಲ್ಲೇ ಅಧಿಕಾರ ಹಸ್ತಾಂತರಿಸುವುದಾಗಿ ತಿಳಿಸಿದರು. ಹೀಗಾಗಿ ವಿಭಜನೆಗೂ ಮೊದಲು ಸಂಪೂರ್ಣ ಸಿದ್ಧತೆ ಮಾಡಲಾಗಲಿಲ್ಲ. ಉಭಯ ದೇಶಗಳ ಗಡಿಗಳನ್ನೂ ಅವಸರದಲ್ಲಿ ಗುರುತು ಮಾಡಲಾಯಿತು. ಇದಕ್ಕಾಗಿ ಕೇವಲ ಐದು ವಾರ ಮಾತ್ರ ಕಾಲಾವಕಾಶ ನೀಡಲಾಗಿತ್ತು ಎಂದು ವಿವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಿಭಜನೆಯನ್ನು ‘ಕರಾಳ ದಿನ’ ಎಂದು ಆಚರಿಸುವುದಾಗಿ 2021ರಲ್ಲಿ ನೀಡಿದ್ದ ಹೇಳಿಕೆಯೊಂದಿಗೆ ಪಠ್ಯಕ್ರಮ ಆರಂಭವಾಗಿದೆ.

ಎನ್‌ಸಿಇಆರ್‌ಟಿ 6ರಿಂದ 8 ಮತ್ತು 9ರಿಂದ 12ನೇ ತರಗತಿಯ ಮಕ್ಕಳಿಗಾಗಿ ಎರಡು ಪ್ರತ್ಯೇಕ ವಿಶೇಷ ಪಠ್ಯಕ್ರಮಗಳನ್ನು ಪ್ರಕಟಿಸಿದೆ. ಇದು ಸಾಮಾನ್ಯ ಪಠ್ಯಕ್ರಮದ ಭಾಗ ಅಲ್ಲ. ಪ್ರಾಜೆಕ್ಟ್‌, ಪೋಸ್ಟರ್‌, ಚರ್ಚೆಗಳಲ್ಲಿ  ವಿಶೇಷ ಪಠ್ಯಕ್ರಮವನ್ನು ಬಳಸಲಾಗುತ್ತದೆ. 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿರುವ ವಿಶೇಷ ಪಠ್ಯಕ್ರಮದಲ್ಲಿ ‘ದೇಶ ವಿಭಜನೆಯ ಕರಾಳ ದಿನ’ ವಿಷಯವಿದೆ.

ಪಠ್ಯಕ್ರಮದ ಇತರ ಅಂಶಗಳು

  • ದೇಶ ವಿಭಜನೆ ಬಳಿಕ ಭಾರತದ ನಕ್ಷೆಗೆ ಸೇರದ ಕಾಶ್ಮೀರವು ಹೊಸ ಸಮಸ್ಯೆಯಾಗಿ ಪರಿಣಮಿಸಿತ್ತು. ಇದು ದೇಶದ ವಿದೇಶಾಂಗ ನೀತಿಗೆ ಸವಾಲಾಗಿತ್ತು

  • ವಿಭಜನೆ ಬಳಿಕ ಕೆಲವು ದೇಶಗಳು ಪಾಕಿಸ್ತಾನಕ್ಕೆ ನೆರವು ನೀಡಲು ಆರಂಭಿಸಿದವು ಮತ್ತು ಕಾಶ್ಮೀರ ವಿಚಾರವಾಗಿ ಭಾರತದ ಮೇಲೆ ಒತ್ತಡ ಹೇರುತ್ತಿದ್ದವು

  • ವಿಭಜನೆಯಾದ ಎರಡು ದಿನಗಳ ನಂತರ ಪಂಜಾಬ್‌ನ ಲಕ್ಷಾಂತರ ಜನರಿಗೆ ತಾವು ಯಾವ ದೇಶಕ್ಕೆ ಸೇರಿದವರು ಎಂದು ತಿಳಿದಿರಲಿಲ್ಲ

  • ಜಿನ್ನಾ ಅವರು ‘ನನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನವನ್ನು ಕಾಣುತ್ತೇನೆ ಎಂದು ಭಾವಿಸಿರಲಿಲ್ಲ’ ಎಂದು ತಮ್ಮ ನಿಕಟವರ್ತಿಯೊಂದಿಗೆ ಹೇಳಿದ್ದರು

  • ‘ಭಾರತ ಯುದ್ಧರಂಗವಾಗಿ ಮಾರ್ಪಟ್ಟಿತ್ತು. ಯುದ್ಧ ನಡೆಯುವುದಕ್ಕಿಂತ ದೇಶವು ವಿಭಜನೆಯಾಗುವುದೇ ಸೂಕ್ತ’ ಎಂದು ಸರ್ದಾರ್‌ ವಲ್ಲಭ ಬಾಯಿ ಪಟೇಲ್‌ ಹೇಳಿದ್ದರು

  • ಮಹಾತ್ಮ ಗಾಂಧಿ ಅವರಿಗೆ ವಿಭಜನೆ ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್‌ ನಿರ್ಧಾರವನ್ನು ವಿರೋಧಿಸಲು ಅವರಿಗೆ ಸಾಧ್ಯವಾಗಲಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.