ADVERTISEMENT

2040ಕ್ಕೆ ಚಂದ್ರನಲ್ಲಿ ಕಾಲಿಡಲಿರುವ ಭಾರತದ ಗಗನಯಾತ್ರಿ: ಜಿತೇಂದ್ರ ಸಿಂಗ್‌

ಬಾಹ್ಯಾಕಾಶ ನೀತಿ ಕುರಿತ ಚರ್ಚೆಯಲ್ಲಿ ಮಾಹಿತಿ

ಪಿಟಿಐ
Published 18 ಆಗಸ್ಟ್ 2025, 14:16 IST
Last Updated 18 ಆಗಸ್ಟ್ 2025, 14:16 IST
<div class="paragraphs"><p>ಜಿತೇಂದ್ರ ಸಿಂಗ್‌</p></div>

ಜಿತೇಂದ್ರ ಸಿಂಗ್‌

   

ನವದೆಹಲಿ: ‘ಭಾರತದ ಗಗನಯಾತ್ರಿಯೊಬ್ಬರು 2040ಕ್ಕೆ ಚಂದ್ರನ ಅಂಗಳಕ್ಕೆ ಕಾಲಿಡಲಿದ್ದು, ‘ವಿಕಸಿತ ಭಾರತ’ಕ್ಕೆ ಆ ಸಂದರ್ಭ ಸಾಕ್ಷಿಯಾಗಲಿದೆ’ ಕೇಂದ್ರ ಭೂ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದರು.

ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಭಾರತಕ್ಕೆ ಮರಳಿದ್ದರಿಂದ ಲೋಕಸಭೆಯಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ADVERTISEMENT

‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತದ ಮೊದಲ ಗಗನಯಾತ್ರಿಯ–2047ರ ಹೊತ್ತಿಗೆ ವಿಕಸಿತ ಭಾರತಕ್ಕಾಗಿ ಬಾಹ್ಯಾಕಾಶ ಕಾರ್ಯಕ್ರಮದ ನಿರ್ಣಾಯಕ ಪಾತ್ರ’ದ ಕುರಿತು ಮಾತನಾಡಿದ ಅವರು, ‘2014ರಲ್ಲಿ ನರೇಂದ್ರ ಮೋದಿ ಅವರು ಪ‍್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಹ್ಯಾಕಾಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ 2020ರಲ್ಲಿ ಖಾಸಗಿ ಕ್ಷೇತ್ರದವರಿಗೂ ಅವಕಾಶ ಮಾಡಿಕೊಟ್ಟ ಬಳಿಕ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಈಗಾಗಲೇ 8 ಬಿಲಿಯನ್‌ ಡಾಲರ್‌ (₹69.88 ಸಾವಿರ ಕೋಟಿ) ತಲುಪಿದ್ದು, ಮುಂದಿನ ದಶಕದ ಒಳಗಾಗಿ 45 ಬಿಲಿಯನ್‌ ಡಾಲರ್‌ (₹3.93 ಲಕ್ಷ ಕೋಟಿ)ಗೆ ತಲುಪಲಿದೆ ಎಂದು ಮಾಹಿತಿ ನೀಡಿದರು.

‘2026ರಲ್ಲಿ ಭಾರತವು ಗಗನಯಾತ್ರಿ ಹೊಂದಿರದ ‘ರೋಬೊ ವ್ಯೋಮಮಿತ್ರ’ ಯೋಜನೆಯನ್ನೂ ಕೈಗೆತ್ತಿಕೊಳ್ಳಲಿದ್ದು, ದೇಶದ ಚೊಚ್ಚಲ ಮಾನವ ಬಾಹ್ಯಾಕಾಶ ಹಾರಾಟ ‘ಗಗನಯಾನ’ವನ್ನು 2027ರಲ್ಲಿ ಹಮ್ಮಿಕೊಳ್ಳಲಿದೆ. 2035ರಲ್ಲಿ ಭಾರತವು ತನ್ನದೇ ಆದ ‘ಭಾರತ್‌ ಅಂತರಿಕ್ಷ ನಿಲ್ದಾಣ’ವನ್ನು ಸ್ಥಾಪಿಸಲಿದೆ. 2040ರಲ್ಲಿ ದೇಶದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡಲಿದ್ದಾರೆ’ ಎಂದು ಸಿಂಗ್‌ ತಿಳಿಸಿದರು.

ಪ್ರತಿಪಕ್ಷಗಳ ಪ್ರತಿಭಟನೆ: ಸಿಂಗ್‌ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ, ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಸದನದವನ್ನು ಮುಂದೂಡಲಾಯಿತು. ಇದರಿಂದ, ಚರ್ಚೆ ಪೂರ್ಣವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.