ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಒಟ್ಟು ₹12,328 ಕೋಟಿ ವೆಚ್ಚದ ಕೇಂದ್ರ ರೈಲ್ವೆ ಸಚಿವಾಲಯದ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಿದೆ.
ಈ ಪೈಕಿ ಕರ್ನಾಟಕದ ವಾಡಿ ಹಾಗೂ ತೆಲಂಗಾಣದ ಸಿಕಂದರಾಬಾದ್ (ಸನತ್‌ನಗರ) ನಡುವೆ ಮೂರು ಹಾಗೂ ನಾಲ್ಕನೇ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸನತ್‌ನಗರ - ಹಫೀಜ್‌ಪೇಟೆ ನಡುವೆ 3ನೇ ಮಾರ್ಗ, ಹಫೀಜ್‌ಪೇಟೆ - ವಾಡಿ ನಡುವೆ 3ನೇ ಮತ್ತು 4ನೇ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯು 5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಮಾರ್ಗವು ಕರ್ನಾಟಕದಲ್ಲಿ 47 ಕಿ.ಮೀ ಹಾಗೂ ತೆಲಂಗಾಣದಲ್ಲಿ 126 ಕಿ.ಮೀ. ಹಾದು ಹೋಗುತ್ತದೆ. ಈ ಯೋಜನೆಯನ್ನು ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹೆಚ್ಚುವರಿ ಮಾರ್ಗ ನಿರ್ಮಾಣದ ಬಳಿಕ ಕಲ್ಲಿದ್ದಲು, ಸಿಮೆಂಟ್, ಕ್ಲಿಂಕರ್ (ಸಿಮೆಂಟ್ ತಯಾರಿಕೆಯಲ್ಲಿ ಬಳಸುವ ವಸ್ತು), ಉಕ್ಕು, ರಸಗೊಬ್ಬರಗಳು, ಕೃಷಿ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆಯ ಹೇಳಿಕೆ ತಿಳಿಸಿದೆ.
ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಜೋಡಿ ಹಳಿ ಮಾರ್ಗಗಳು ಇವೆ. ಆದರೆ, ಈ ಹಿಂದೆ ಬೆಂಗಳೂರು-ವೈಟ್‌ಫೀಲ್ಡ್ ನಡುವೆ ಮೂರನೇ ಹಾಗೂ ನಾಲ್ಕನೇ ಮಾರ್ಗದ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಈ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ವಾಡಿ-ಸಿಕಂದರಾಬಾದ್ ನಡುವೆ ಹೆಚ್ಚುವರಿ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.