ಸಂಸತ್ ಆವರಣದಲ್ಲಿ ವಿಪಕ್ಷಗಳ ಪ್ರತಿಭಟನೆ
(ಪಿಟಿಐ ಚಿತ್ರ)
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು (ಎಸ್‌ಐಆರ್) ವಿರೋಧಿಸಿ ಸಂಸತ್ ಆವರಣದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ನಾಯಕರು ಇಂದು (ಶುಕ್ರವಾರ) ಕೂಡ ಪ್ರತಿಭಟನೆ ನಡೆಸಿದ್ದಾರೆ.
ಎಸ್‌ಐಆರ್ ಪೋಸ್ಟರ್‌ಗಳನ್ನು ಹರಿದು ಹಾಕುವ ಮೂಲಕ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ಈ ವಿಷಯದ ಕುರಿತಂತೆ ಉಭಯ ಸದನಗಳಲ್ಲಿ ಚರ್ಚೆ ನಡೆಸುವಂತೆ ಸಂಸದರು ಒತ್ತಾಯಿಸಿದ್ದಾರೆ.
ಕಲಾಪ ಆರಂಭಕ್ಕೂ ಮುನ್ನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಟಿಎಂಸಿ, ಆರ್‌ಜೆಡಿ, ಎಡರಂಗ ಸೇರಿದಂತೆ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದಾರೆ.
ನಾಯಕರು 'ಪ್ರಜಾಪ್ರಭುತ್ವ ರಕ್ಷಿಸಿ', 'ಮತ ಕಳ್ಳತನ ನಿಲ್ಲಿಸಿ' ಎಂಬ ಘೋಷಣೆಗಳನ್ನು ಕೂಗಿದರು. ಬಿಹಾರದಲ್ಲಿ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಇರಾದೆಯನ್ನು ಚುನಾವಣಾ ಆಯೋಗ (ಇಸಿ) ಹೊಂದಿದೆ ಎಂದು ವಿಪಕ್ಷಗಳು ಆರೋಪಿಸಿವೆ.
'ಬಡವರನ್ನು ಮತದಾನದಿಂದ ದೂರವಿರಿಸಿ ಗಣ್ಯರಿಗೆ ಮಾತ್ರ ಅವಕಾಶ ನೀಡುವ ಉದ್ದೇಶವಾಗಿದೆ. ಎಲ್ಲರಿಗೂ ಸಮಾನ ಮತದಾನದ ಹಕ್ಕು ಇರಬೇಕು. ಆದರೆ ಮತದಾನದ ಹಕ್ಕುಗಳನ್ನು ಪರಿಷ್ಕರಿಸಲು ಯತ್ನಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಹಾನಿಯಾಗಿದ್ದು, ಸಂವಿಧಾನ ವಿರುದ್ಧವಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.