ADVERTISEMENT

ಕೋವಿಡ್ ಲಸಿಕೆ ಪಡೆದವರಿಗೆ ಪ್ರಯಾಣ ದರದಲ್ಲಿ ಶೇ 10ರಷ್ಟು ರಿಯಾಯಿತಿ: ಇಂಡಿಗೊ

ಪಿಟಿಐ
Published 23 ಜೂನ್ 2021, 6:56 IST
Last Updated 23 ಜೂನ್ 2021, 6:56 IST
ಸಾಂದರ್ಭಿಕ ಚಿತ್ರ (ಕೃಪೆ – ರಾಯಿಟರ್ಸ್)
ಸಾಂದರ್ಭಿಕ ಚಿತ್ರ (ಕೃಪೆ – ರಾಯಿಟರ್ಸ್)   

ನವದೆಹಲಿ: ಕನಿಷ್ಠ 1 ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಇಂದಿನಿಂದ (ಬುಧವಾರ) ಪ್ರಯಾಣ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡುವುದಾಗಿ ಇಂಡಿಗೊ ವಿಮಾನಯಾನ ಕಂಪನಿ ಘೋಷಿಸಿದೆ.

ಟಿಕೆಟ್‌ನ ಮೂಲದರದಲ್ಲಿ ರಿಯಾಯಿತಿ ದೊರೆಯಲಿದೆ ಮತ್ತು ಇದು ಸೀಮಿತವಾಗಿರಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ರಿಯಾಯಿತಿಯು 18 ವರ್ಷ ಮೇಲ್ಪಟ್ಟ ಮತ್ತು ಲಸಿಕೆ ಪಡೆದುಕೊಂಡವರಿಗೆ ಮಾತ್ರ ದೊರೆಯಲಿದೆ. ಲಸಿಕೆಯ ಕನಿಷ್ಠ ಒಂದು ಡೋಸ್ ಆದರೂ ಪಡೆದಿರಬೇಕು. ಭಾರತದಲ್ಲಿ ಲಸಿಕೆ ಪಡೆದವರಿಗೆ ಈ ಪ್ರಯೋಜನ ದೊರೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಸೌಲಭ್ಯವನ್ನು ಪಡೆದುಕೊಂಡವರು ಲಸಿಕೆ ಪಡೆದುಕೊಂಡಿರುವ ಬಗ್ಗೆ ಆರೋಗ್ಯ ಸಚಿವಾಲಯದ ಪ್ರಮಾಣಪತ್ರವನ್ನು ವಿಮಾನ ನಿಲ್ದಾಣಗಳ ಚೆಕ್ ಇನ್ ಕೌಂಟರ್‌ಗಳಲ್ಲಿ ತೋರಿಸಬೇಕಾಗುತ್ತದೆ. ಅಥವಾ ಆರೋಗ್ಯ ಸೇತು ಮೊಬೈಲ್ ಆ್ಯಪ್ ಮೂಲಕ ಲಸಿಕೆ ಪಡೆದುಕೊಂಡಿರುವ ಬಗ್ಗೆ ಚೆಕ್ ಇನ್ ಕೌಂಟರ್‌ಗಳಲ್ಲಿ ಮಾಹಿತಿ ನೀಡಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.

ದೇಶದ ಅತಿದೊಡ್ಡ ವಿಮಾನಯಾನ ಕಂಪನಿಯಾಗಿ, ಲಸಿಕೆ ಪಡೆಯುವಂತೆ ಜನರನ್ನು ಉತ್ತೇಜಿಸುವ ಮೂಲಕ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ ಎಂಬುದಾಗಿ ಭಾವಿಸಿದ್ದೇವೆ ಎಂದು ಇಂಡಿಗೊದ ಮುಖ್ಯ ಕಾರ್ಯತಂತ್ರ ಮತ್ತು ಕಂದಾಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.