ADVERTISEMENT

ಜಯಪ್ರಕಾಶ್ ನಾರಾಯಣ್ ಚಿಕಿತ್ಸೆಗೆ ₹90 ಸಾವಿರ ನೀಡಿದ್ದ ಇಂದಿರಾ ಗಾಂಧಿ!

ಪಿಟಿಐ
Published 25 ಜೂನ್ 2025, 9:11 IST
Last Updated 25 ಜೂನ್ 2025, 9:11 IST
<div class="paragraphs"><p>ಇಂದಿರಾ ಗಾಂಧಿ</p></div>

ಇಂದಿರಾ ಗಾಂಧಿ

   

ನವದೆಹಲಿ: 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಅತ್ಯಂತ ಕಟು ವಿಮರ್ಶಕ, ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಚಿಕಿತ್ಸೆಗಾಗಿ ಸದ್ದಿಲ್ಲದೆ ₹90,000 ಧನ ಸಹಾಯ ಮಾಡಿದ್ದರು ಎಂಬ ವಿಚಾರ ತಿಳಿದುಬಂದಿದೆ.

ಜಯಪ್ರಕಾಶ್ ನಾರಾಯಣ್ ಅವರ ಆರೋಗ್ಯ ಹದಗೆಟ್ಟಿದ್ದ ಸಮಯದಲ್ಲಿ ಜೀವ ಉಳಿಸುವ ಪೋರ್ಟಬಲ್ ಡಯಾಲಿಸಿಸ್ ಯಂತ್ರದ ಅಗತ್ಯವಿತ್ತು. ಆಗ ಇಂದಿರಾ ಗಾಂಧಿ ನೀಡಿದ್ದ ಹಣವನ್ನು ಬಳಸಲಾಯಿತು ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ‘ದಿ ಕನ್ಸೈನ್ಸ್ ನೆಟ್‌ವರ್ಕ್: ಎ ಕ್ರಾನಿಕಲ್ ಆಫ್ ರೆಸಿಸ್ಟೆನ್ಸ್ ಟು ಎ ಡಿಕ್ಟೇಟರ್‌ಶಿಪ್’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತುರ್ತು ಪರಿಸ್ಥಿತಿ ಘೋಷಿಸಿದ ಕೆಲವೇ ಗಂಟೆಗಳ ನಂತರ 1975ರ ಜೂನ್ 26ರಂದು ಜಯಪ್ರಕಾಶ್ ನಾರಾಯಣ್ ಅವರನ್ನು ಬಂಧಿಸಿ ಚಂಡೀಗಢ ಜೈಲಿನಲ್ಲಿ ಇಡಲಾಗಿತ್ತು. ಬಳಿಕ ಆದೇ ವರ್ಷ ನವೆಂಬರ್‌ನಲ್ಲಿ 30 ದಿನಗಳ ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.

ಜೆಪಿ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಆಗ ಅವರಿಗೆ ಪೋರ್ಟಬಲ್ ಡಯಾಲಿಸಿಸ್ ಯಂತ್ರದ ಅಗತ್ಯವಿತ್ತು. ಇಂದಿರಾ ನೇತೃತ್ವದ ಸರ್ಕಾರ ನೆರವು ಒದಗಿಸಲು ಮುಂದಾದರೂ ಜೆಪಿ ನಿರಾಕರಿಸಿದ್ದರು. ಬಳಿಕ ಅವರ ಅಭಿಮಾನಿಗಳು ಡಯಾಲಿಸಿಸ್ ಯಂತ್ರಕ್ಕಾಗಿ ದೇಣಿಗೆ ಸಂಗ್ರಹಿಸಲು ಅಭಿಯಾನ ಆರಂಭಿಸಿದ್ದರು.

ಜೆಪಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಸುದ್ದಿ ಹರಡುತ್ತಿದ್ದಂತೆ ಭಾರತ ಸೇರಿದಂತೆ ವಿದೇಶಗಳಲ್ಲಿ ಇರುವ ಬೆಂಬಲಿಗರು ಡಯಾಲಿಸಿಸ್ ಯಂತ್ರಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯಿಂದ ₹1 ಸಂಗ್ರಹಿಸುವುದು ನಿರ್ಧರಿಸಿದ್ದರು. ಆದಾಗ್ಯೂ, ಇದು ತಡವಾಗಿತ್ತು. ಈ ವಿಚಾರ ತಿಳಿದ ಇಂದಿರಾ ಗಾಂಧಿ ಅವರು ತಮ್ಮ ಕೊಡುಗೆಯಾಗಿ ಒಂದು ದೊಡ್ಡ ಮೊತ್ತದೊಂದಿಗೆ ಚೆಕ್ ಅನ್ನು ಕಳುಹಿಸಿದ್ದರು ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.