ADVERTISEMENT

ನಿರೀಕ್ಷಣಾ ಜಾಮೀನು: ಚಿದಂಬರಂಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆ

ಮೇಲ್ಮನವಿ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ

ಪಿಟಿಐ
Published 26 ಆಗಸ್ಟ್ 2019, 7:38 IST
Last Updated 26 ಆಗಸ್ಟ್ 2019, 7:38 IST
   

ನವದೆಹಲಿ:ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆಯಾಗಿದೆ.

ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ದೆಹಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಸೋಮವಾರ ತಿರಸ್ಕೃತಗೊಂಡಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠವು ಚಿದಂಬರಂ ಅವರು ಈಗಾಗಲೇ ಸಿಬಿಐ ವಶದಲ್ಲಿರುವುದರಿಂದ ಅರ್ಜಿ ಮಹತ್ವ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಕಾನೂನಿನ ಅನುಸಾರ ಪರಿಹಾರ ಪಡೆಯಲು ಚಿದಂಬರಂ ಸ್ವತಂತ್ರರಾಗಿದ್ದಾರೆ ಎಂದೂ ಹೇಳಿದೆ.

ಚಿದಂಬರಂ ಅವರ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ಅವರನ್ನುಸಿಬಿಐ ಕೋರ್ಟ್‌ಗೆ ಹಾಜರುಪಡಿಸಲಿದೆ. ಈ ವೇಳೆ ಇನ್ನೂ ಕೆಲ ದಿನಗಳ ಮಟ್ಟಿಗೆ ವಶಕ್ಕೆ ಒಪ್ಪಿಸುವಂತೆ ಸಿಬಿಐ ಮನವಿ ಮಾಡುವ ಸಾಧ್ಯತೆ ಇದೆ.

ಸದ್ಯ, ಜಾರಿ ನಿರ್ದೇಶನಾಲಯದಿಂದ (ಇ.ಡಿ) ಚಿದಂಬರಂ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಳೆದ ವಾರ ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಬುಧವಾರ ರಾತ್ರಿ ಸಿಬಿಐ ಅವರನ್ನು ಬಂಧಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.